ಕೆಜಿಎಫ್- ನಗರಸಭಾ ವ್ಯಾಪ್ತಿಯ 35 ವಾರ್ಡ್ಗಳಲ್ಲಿ ಹಲವು ವರ್ಷಗಳಿಂದ ಬೆಟ್ಟದಂತೆ ಸಂಗ್ರಹವಾಗಿರುವ ಕಸವನ್ನು ಕರಗಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಇದೇ ರೀತಿ ಜಿಲ್ಲಾದ್ಯಂತ ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗಿರುವ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಯೋಜನಾಧಿಕಾರಿ ಅಂಬಿಕಾ ಹೇಳಿದರು.
ನಗರದ ಪಾರಂಡಹಳ್ಳಿ ಹೊರ ವಲಯದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯ ನಗರ ಪ್ರದೇಶದ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯ ಕಸ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಕಸ ವಿಂಗಡಣೆ ಮಾಡುವ ಮೂಲಕ ಜಿಲ್ಲೆಯನ್ನು ಕಸಮುಕ್ತವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ನಿತ್ಯ 40 ಟನ್ ಹಸಿ ಹಾಗೂ ಒಣ ಕಸ ಸಂಗ್ರಹಿಸಲಾಗುತ್ತಿದ್ದು, ಹಲವು ವರ್ಷಗಳಿಂದ ಸರ್ಮಪಕವಾಗಿ ವಿಂಗಡಣೆ ಮಾಡದೇ ಇರುವುದರಿಂದ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ರಾಶಿ ರಾಶಿ ಕಸ ಸಂಗ್ರಹವಾಗಿದೆ. ಕಸವನ್ನು ಯಂತ್ರೋಪಕರಣದಿಂದ ವಿಂಗಡಿಸುವ ಪ್ರಕ್ರಿಯೆಗಾಗಿ ಗುತ್ತಿಗೆ ನೀಡಲಾಗಿದ್ದು, ಡಿಸೆಂಬರ್ ತಿಂಗಳ ಹೊತ್ತಿಗೆ ಜಿಲ್ಲಾದ್ಯಂತ ಕಸ ವಿಂಗಡಿಸುವ ಪ್ರಕ್ರಿಯೆ ನಡೆಯಲಿದೆ. ನ್ಯಾಯಾಲಯದ ಆದೇಶದಂತೆ ಮೂಲದಲ್ಲೇ ಕಸವನ್ನು ಹಸಿ ಮತ್ತು ಒಣ ಕಸ ಎಂದು ಬೇರ್ಪಡಿಸಿ, ನಾಗರಿಕರಿಂದ ಸಂಗ್ರಹ ಮಾಡುವ ಮೂಲಕ ತ್ವರಿತವಾಗಿ ಕಸ ವಿಲೇವಾರಿ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ನಗರಸಭೆ ಪೌರಾಯುಕ್ತ ಆಂಜನೇಯಲು ತಿಳಿಸಿದರು.
ಆರೋಗ್ಯ ನಿರೀಕ್ಷಕಿ ಗೌರಿ, ಪ್ರಿಯಾಂಕಾ, ಹರೀಶ್, ವ್ಯವಸ್ಥಾಪಕ ಶಶಿಕುಮಾರ್, ಕೃಷ್ಣಮೂರ್ತಿ ಇದ್ದರು.
-14 ಕೆಜಿಎಫ್&-1
ಕೆಜಿಎ್ ತಾಲೂಕು ಪಾರಂಡಹಳ್ಳಿ ಹೊರ ವಲಯದಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಜಿಲ್ಲಾ ಯೋಜನಾಧಿಕಾರಿ ಅಂಬಿಕಾ ಭೇಟಿ ನೀಡಿ, ಪರಿಶೀಲನೆ ನಡೆಸಿದರು.