ಕೇಶವಮೂರ್ತಿ ವಿ.ಬಿ. ಹಾವೇರಿ
ಘನತ್ಯಾಜ್ಯ ವಿಲೇವಾರಿಗಾಗಿ ಹಾವೇರಿ ನಗರಸಭೆ ವತಿಯಿಂದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 46 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿದ್ದ 32 ಸಾವಿರ ಕಸದ ಡಬ್ಬಿಗಳು ಮೂಲೆ ಸೇರಿವೆ.
ಹಸಿ ಕಸ ಮತ್ತು ಒಣ ಕಸವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವ ಉದ್ದೇಶದಿಂದ ನಗರಸಭೆ ಮನೆ ಮನೆಗೆ ಉಚಿತವಾಗಿ ಎರಡು ಕಸದ ಡಬ್ಬಿ ವಿತರಿಸುವ ಯೋಜನೆ ಹಾಕಿಕೊಂಡಿತ್ತು. ಈ ನಿಟ್ಟಿನಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆಯೇ 32,350 ಡಸ್ಟ್ ಬಿನ್ಗಳನ್ನು ಖರೀದಿಸಿ, 14ನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಿ ಮಂಜೂರಾತಿ ಪಡೆಯಲಾಗಿತ್ತು.
ನಗರಸಭೆ ವ್ಯಾಪ್ತಿಯ 31 ವಾರ್ಡಗಳಲ್ಲಿ 16,175 ಮನೆಗಳಿವೆ. ಎಲ್ಲ ಮನೆಗಳಿಗೆ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕೊಡಲು 10 ಲೀಟರ್ ಸಾಮರ್ಥ್ಯದ ಎರಡು ಡಸ್ಟ್ ಬಿನ್ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಮಾರ್ಚ್ನಲ್ಲಿ ಅಂದಿನ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದ್ದರು. ಆದರೆ, ಈವರೆಗೆ ಜನರಿಗೆ ತಲುಪಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿಲ್ಲ. ನಾಲ್ಕೈದು ತಿಂಗಳಿಂದ ಕಸದ ಡಬ್ಬಿಗಳನ್ನು ಗೂಗಿಕಟ್ಟಿಯ ಹೈಟೆಕ್ ರಂಗಮಂದಿರದಲ್ಲಿ ಇಡಲಾಗಿದೆ.
ಮೂಲದಲ್ಲೇ ಕಸ ಪ್ರತ್ಯೇಕಿಸಿ ಕೊಟ್ಟರೆ ಕಸ ವಿಲೇವಾರಿ ಸುಲಭವಾಗಲಿದೆ. ಹಲವರು ಈ ಬಗ್ಗೆ ಒಲವು ತೋರಿಸುತ್ತಿಲ್ಲ. ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ, ಕಸದ ಡಬ್ಬಿಗಳನ್ನು ವಿತರಿಸಲಾಗುತ್ತಿದೆ. ಟಿಪ್ಪರ್ಗಳ ಕೊರತೆ ನೀಗಿಸಲು ಹೆಚ್ಚುವರಿ ಟಿಪ್ಪರ್ಗಳ ಖರೀದಿಗಾಗಿ ಚಿಂತನೆ ನಡೆಸಲಾಗಿದೆ ಎನ್ನುತ್ತಾರೆ ಪರಿಸರ ವಿಭಾಗದ ಅಧಿಕಾರಿಗಳು.
ಇನ್ನಾದರೂ ನಗರಸಭೆ ಅಧಿಕಾರಿಗಳು ಕಸದ ಡಬ್ಬಿಗಳನ್ನು ಮನೆ ಮನೆಗಳಿಗೆ ತಲುಪಿಸಬೇಕು. ಅವುಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಕಸದ ವಾಹನಗಳು ನಿತ್ಯವೂ ಮನೆಗೆ ತೆರಳುವಂತೆ ಅಗತ್ಯ ಕ್ರಮ ಜರುಗಿಸಬೇಕು ಎಂಬುದು ನಗರದ ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ಟಿಪ್ಪರ್ಗಳ ಕೊರತೆ
ನಗರಸಭೆ ವ್ಯಾಪ್ತಿಯ 31 ವಾರ್ಡಗಳಲ್ಲಿ ಕಸ ಸಂಗ್ರಹಿಸಲು 16 ಟಿಪ್ಪರ್ ವಾಹನಗಳಿವೆ. ಇನ್ನೂ ಹೆಚ್ಚಿನ ಟಿಪ್ಪರ್ಗಳ ಅವಶ್ಯಕತೆ ಇದೆ. ಟಿಪ್ಪರ್ಗಳ ಕೊರತೆ ಕಾರಣಕ್ಕೆ ನಿತ್ಯವೂ ಮನೆ ಮನೆಯಿಂದ ಕಸ ಸಂಗ್ರಹ ಸಾಧ್ಯವಾಗುತ್ತಿಲ್ಲ. ಎರಡು, ಮೂರು ದಿನಗಳಿಗೊಮ್ಮೆ ವಾಹನಗಳು ತೆರಳುತ್ತಿವೆ. ಕಸದ ವಾಹನ ಹೋಗುವುದು ತಡವಾದರೆ ಕೆಲ ನಿವಾಸಿಗಳು ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಕಸ ಚೆಲ್ಲುತ್ತಾರೆ. ಇದರಿಂದ ರೋಗಭೀತಿ ಉಂಟಾಗುತ್ತಿದೆ. ಟಿಪ್ಪರ್ ಖರೀದಿಗೆ ನಗರಸಭೆ ಕ್ರಮ ಕೈಗೊಳ್ಳಬೇಕಿದೆ.
ಚುನಾವಣೆ, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಸದ ಡಬ್ಬಿ ವಿತರಣೆ ಮಾಡಲು ಆಗಿರಲಿಲ್ಲ. ಸ್ಥಳೀಯ ಶಾಸಕರೊಂದಿಗೆ ರ್ಚಚಿಸಿ, ಸದ್ಯದಲ್ಲೇ ಮನೆ ಮನೆಗೆ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ. - ಡಿ.ದೇವರಾಜು ಪೌರಾಯುಕ್ತ, ಹಾವೇರಿ ನಗರಸಭೆ