ಹಾನಗಲ್ಲ: ಭೂಮಿ ಖರೀದಿಗೆ ಹಣ ವಿನಿಯೋಗಿಸಿದರೆ ಕೈತುಂಬ ಲಾಭ ಬರುತ್ತದೆಂಬ ಉದ್ದೇಶದಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಿವೇಶನ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಇಂಥ ನಿವೇಶನಗಳು ಕಸದ ತೊಟ್ಟಿಗಳಾಗಿ ಸಾರ್ವಜನಿಕರು ಮತ್ತು ಪುರಸಭೆ ಅಧಿಕಾರಿಗಳಿಗೆ ಸಮಸ್ಯೆ ಉಂಟು ಮಾಡುತ್ತಿವೆ.
ಬಹಳಷ್ಟು ಜನರು ನಿವೇಶನ ಖರೀದಿಸಿ ಖಾಲಿ ಬಿಟ್ಟಿದ್ದಾರೆ. ಇಂಥ ನಿವೇಶನಗಳು ಬಡಾವಣೆಯ ಜನರಿಗೆ ಕಸ ಹಾಕುವುದಕ್ಕೆ ಹೇಳಿ ಮಾಡಿಸಿದಂತಾಗಿವೆ. ಇವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪುರಸಭೆ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕಿದೆ. ಆದರೆ, ಇದಕ್ಕೆ ಕಾನೂನಿನಲ್ಲಿ ಅವಕಾಶವಿದ್ದರೂ ಪುರಸಭೆ ಅಗತ್ಯ ಮೂಲಸೌಲಭ್ಯ ಒದಗಿಸುವುದರಲ್ಲೇ ಹೈರಾಣಾಗಿದೆ.
ಖಾಲಿ ನಿವೇಶನಗಳಲ್ಲಿ ಸಾರ್ವಜನಿಕರು ಕಸ ಚೆಲ್ಲುತ್ತಿರುವುದಲ್ಲದೆ, ನಿವೇಶನಗಳಲ್ಲಿ ಮುಳ್ಳು ಕಂಟಿಗಳು ಬೆಳೆಯುತ್ತಿವೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಇಂಥ ನಿವೇಶನಗಳನ್ನು ಅದರ ಮಾಲೀಕರು ನಿರ್ವಹಣೆ ಮಾಡಬೇಕಿದೆ. ಆದರೆ, ಮಾಲೀಕರು ಬೇರೆ ನಗರ ಪ್ರದೇಶಗಳಲ್ಲಿ ವಾಸವಾಗಿದ್ದು, ವರ್ಷಕ್ಕೊಮ್ಮೆ ಬಂದು ನೋಡಿ ಹೋಗುವ ಪರಿಪಾಠ ಹಾಕಿಕೊಂಡಂತಿದೆ. ಖಾಸಗಿ ನಿವೇಶನಗಳಾದ್ದರಿಂದ ಅಲ್ಲಿ ಬಿದ್ದಿರುವ ಕಸವನ್ನೂ ಪುರಸಭೆ ತೆಗೆದು ಹಾಕಲು ಮನಸು ಮಾಡುತ್ತಿಲ್ಲ. ಕೆಲವು ಮಾಲೀಕರು ಇವುಗಳ ತೆರಿಗೆಯನ್ನೂ ಕಟ್ಟದೇ ದೂರ ಉಳಿದಿದ್ದಾರೆ.
ಖಾಲಿ ನಿವೇಶನಗಳು ಹಂದಿ-ನಾಯಿಗಳಿಗೆ ವಾಸಮಾಡಲು ಅನುಕೂಲಕರವಾದ ಸ್ಥಳವಾಗುತ್ತಿವೆ. ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿ ಮಾರಾಟವಾಗಿ ಉಳಿದ ತರಕಾರಿಗಳನ್ನು ಖಾಲಿ ನಿವೇಶನಗಳಲ್ಲಿ ಬಿಸಾಡಿ ಹೋಗುತ್ತಾರೆ. ಇದನ್ನು ತಡೆಯುವವರೂ ಇಲ್ಲದಂತಾಗಿದೆ. ಇದರಿಂದ ಸಾರ್ವಜನಿಕರಿಗೆ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಮಳೆಗಾಲದಲ್ಲಂತೂ ಖಾಲಿ ನಿವೇಶನಗಳು ಕಸದೊಂದಿಗೆ ಕೊಳಚೆಯನ್ನೂ ಸೃಷ್ಟಿಸುತ್ತಿವೆ.
ಪುರಸಭೆ ಅಧಿಕಾರಿಗಳು ಖಾಲಿ ನಿವೇಶನಗಳ ಮಾಲೀಕರ ಪಟ್ಟಿ ಮಾಡಿ ಅವರಿಗೆ ನೋಟಿಸ್ ಜಾರಿಗೊಳಿಸಬೇಕು. ನಿವೇಶನ ಖರೀದಿಸಿದಾಗ ಖಾತಾ ಬದಲಾವಣೆಯ ಸಂದರ್ಭದಲ್ಲಿ ಒಂದೆರಡು ವರ್ಷಗಳಲ್ಲಿ ಕಟ್ಟಡ ಕಟ್ಟುವ ಬಗ್ಗೆ ಮಾಲೀಕರಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ನಿಗದಿತ ಸಮಯದಲ್ಲಿ ಕಟ್ಟದಿದ್ದರೆ ಪ್ರತಿ ವರ್ಷ ದಂಡ ಹಾಕುವಂತಾಗಬೇಕು. ಅಂದಾಗ ಮಾತ್ರ ಇಂಥ ಸಮಸ್ಯೆಗೆ ಒಂದಷ್ಟು ಪರಿಹಾರ ಕಾಣಬಹುದು ಎಂಬುದು ನಾಗರಿಕರ ಅಭಿಪ್ರಾಯ.
ಹಾನಗಲ್ಲ ಪುರಸಭೆ ವ್ಯಾಪ್ತಿ
ವಾಸದ ಮನೆಗಳು-7265
ವಾಣಿಜ್ಯ ನಿವೇಶನಗಳು-485
ಖಾಲಿ ನಿವೇಶನಗಳು-2486
ಒಟ್ಟು-10,236 ಆಸ್ತಿಗಳಿವೆ.
ಖಾಲಿ ನಿವೇಶನಗಳ ಮಾಲೀಕರು ಜಾಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸುತ್ತಲೂ ಕಾಂಪೌಂಡ್ ಹಾಕಿಕೊಳ್ಳಬೇಕು. ಸ್ಥಳೀಯವಾಗಿರುವ ಮಾಲೀಕರಿಗೆ ಕಾಲ-ಕಾಲಕ್ಕೆ ಸೂಚನೆ ನೀಡಲಾಗುತ್ತಿದೆ. ಬಹಳಷ್ಟು ಮಾಲೀಕರು ಪರಸ್ಥಳದಲ್ಲಿ ವಾಸವಾಗಿದ್ದಾರೆ. ಹೀಗಾಗಿ ಅಂಥ ನಿವೇಶನಗಳದೇ ದೊಡ್ಡ ಸಮಸ್ಯೆಯಾಗುತ್ತಿದೆ. ಇವುಗಳ ತೆರಿಗೆ ವಸೂಲಿಗೂ ಸಮಸ್ಯೆಯಾಗಿದೆ. ಬೇರೆಯವರ ಖಾಲಿ ನಿವೇಶನದಲ್ಲಿ ಕಸ ಚೆಲ್ಲುವುದು ಒಳ್ಳೆಯ ಬೆಳವಣಿಗೆಯಲ್ಲ. ಖಾಲಿ ನಿವೇಶನಗಳ ಮಾಲೀಕರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.ಪಿ.ಕೆ. ಗುಡದಾರಿ,ಮುಖ್ಯಾಧಿಕಾರಿ ಹಾನಗಲ್ಲ ಪುರಸಭೆ.