ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ನಗರವನ್ನು ಕಸಮುಕ್ತ, ಸುಂದರ ಹಾಗೂ ಸುಸಜ್ಜಿತವಾಗಿಸಲು ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುತಿದ್ದು, ಮೊದಲಿಗೆ ಕಸ ಸಂಗ್ರಹ ವಾಹನಗಳ ಕೊರತೆ ನೀಗಿಸಲು ವೈಯಕ್ತಿಕವಾಗಿ ನಗರಸಭೆಗೆ ನಾಲ್ಕು ಕಸ ಸಂಗ್ರಹ ಆಟೋಗಳನ್ನು ಒದಗಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಗರದ ನಗರಸಭೆ ಆವರಣದಲ್ಲಿ ಭಾನುವಾರ ಆಟೊಗಳನ್ನು ನಗರಸಭೆಗೆ ಹಸ್ತಾಂತರಿಸಿ ಮಾತನಾಡಿ, ಚುನಾವಣೆಗೂ ಮುನ್ನ ನೀಡಿದ್ದ ಪ್ರಮುಖ ನಾಲ್ಕು ಭರವಸೆಗಳಾದ ಶುದ್ಧ ಕುಡಿಯುವ ನೀರು, ಕಸದ ಸಮಸ್ಯೆ, ಒಳಚರಂಡಿ ಹಾಗೂ ಅಂಡರ್ ಗ್ರೌಂಡಿಂಗ್ ವಿದ್ಯುತ್ ಕೇಬಲಿಂಗ್‌ಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಮೊದಲಿಗೆ ನಗರದಲ್ಲಿದ್ದ ಹಲವು ಕಸದ ಬ್ಲಾಕ್‌ಸ್ಪಾಟ್‌ಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಿ ಕಸ ಸಂಗ್ರಹಣೆಗೆ ಸಮರ್ಪಕ ಕಾರ್ಯಕ್ರಮ ಜಾರಿಮಾಡಲಾಗಿದೆ ಎಂದರು.
ನಗರಕ್ಕೆ ಕಾವೇರಿ ನೀರು ಹರಿಸಲು ಈಗಾಗಲೇ ಉಪಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದು, 2013ರಿಂದ 2023ರವರೆಗೆ ನೆನೆಗುದಿಗೆ ಬಿದ್ದಿದ್ದ 45 ಕೋಟಿ ರೂ.ವೆಚ್ಚದ ಒಳಚರಂಡಿ ಕಾಮಗಾರಿಗೆ ಹೆಚ್ಚುವರಿ 25 ಕೋಟಿ ರೂ. ಬಿಡುಗಡೆ ಮಾಡಿ ನಗರದ ಚಿಕ್ಕ ಅಮಾನಿಕೆರೆ ಹಾಗೂ ನಗರ ಹೊರವಲಯದ ಪೆತ್ತನಹಳ್ಳಿ ಕೆರೆ ಭಾಗದಲ್ಲಿ ಸಂಸ್ಕರಣಾ ಘಟಕ ನಿರ್ಮಾಣ ಮಾಡುವ ಮೂಲಕ ಒಳಚರಂಡಿ ಕಾಮಗಾರಿ ಸಂಪೂರ್ಣಗೊಳಿಸಲಾಗುವುದು ಎಂದರು.
ಮುಖಂಡರಾದ ಬೈರೇಗೌಡ, ಬಚ್ಚೇಗೌಡ, ಗೋಪಿ, ಅರುಣ್, ಗೋವಿಂದ್‌ರಾಜ್, ಮಹೇಶ್‌ಕುಮಾರ್ ಇದ್ದರು.
ಬೇಡಿಕೆಗೆ ಅನುಗುಣವಾಗಿ ಹಣ ಈ ಬಾರಿಯ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಯಾವ ಜಿಲ್ಲೆಗೆ ಅಥವಾ ತಾಲೂಕಿಗೆ ನೂತನ ಯೋಜನೆಗಳನ್ನು ೋಷಣೆ ಮಾಡಿಲ್ಲ. ಸಿಎಂ ಸಿದ್ದರಾಮಯ್ಯನವರು ಪಾರದರ್ಶಕ ಬಜೆಟ್ ಮಂಡಿಸಿದ್ದು, ಎಲ್ಲ ಇಲಾಖೆಗಳಿಗೆ ಸಮರ್ಪಕ ಅನುದಾನ ಒದಗಿಸಿದ್ದಾರೆ. ಆಯಾ ಭಾಗದ ಉಸ್ತುವಾರಿ ಮಂತ್ರಿಗಳು ಹಾಗೂ ಶಾಸಕರ ಬೇಡಿಕೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದು ಶರತ್ ಬಚ್ಚೇಗೌಡ ತಿಳಿಸಿದರು.
ಆರೋಪ ಮಾಡುವವರದ್ದು ಭಾಗವಿದೆ ರಾಜಕಾಲುವೆ ತೆರವು ಬಗ್ಗೆ ಎಲ್ಲರೂ ಕ್ರಮಕೈಗೊಳ್ಳುತಿದ್ದಾರೆ. ಮೇಕೆದಾಟು ಯೋಜನೆ ಮಾಡುವ ವೇಳೆ ಪರಿಸರ ಸಂರಕ್ಷಣಾ ಸಂಸ್ಥೆಗಳು, ಪರಿಸರ ಪ್ರೇಮಿಗಳು ಸಹ ಮೊದಲು ರಾಜಕಾಲುವೆಗಳಿಗೆ ಪುನಶ್ಚೇತನ ನೀಡಿ ಸರಾಗವಾಗಿ ನೀರು ಹರಿಯುವಂತೆ ಮಾಡಿದಲ್ಲಿ ನೀರಿನ ಮೂಲಗಳ ಉಳಿವು ಸಾಧ್ಯ ಎಂದಿದ್ದಾರೆ. ಬೆಂಗಳೂರಿನಲ್ಲಿ ಸಣ್ಣ ಮಳೆಯಾರೂ ಎಲ್ಲ ಕಡೆ ನೀರು ನಿಲ್ಲುತ್ತದೆ. ಪ್ರಭಾವಿಗಳ ಸಹಕಾರದಿಂದ ಬಹುತೇಕರು ರಾಜಕಾಲುವೆಗಳನ್ನು ಒತ್ತುವರಿ ಮಾಡಿದ್ದು, ಆರೋಪ ಮಾಡುವವರೂ ಸಹ ಭಾಗಿಗಳಾಗಿದ್ದಾರೆ. ಬಜೆಟ್ ಚರ್ಚೆಯಲ್ಲಿ ಕಂದಾಯ ಸಚಿವರ ಆದೇಶದಂತೆ ರಾಜಕಾಲುವೆ ತೆರವಿಗೆ ಸರ್ಕಾರವೇ ಕ್ರಮಕೈಗೊಳ್ಳುತ್ತಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.