ಮಡಿಕೇರಿ:
ಕೊಡಗು ಎಂದ ಕೂಡಲೇ ಇಲ್ಲಿಯ ಹಸಿರು ಪರಿಸರ, ತಂಪಾದ ವಾತಾವರಣ ನೆನಪಿಗೆ ಬರುತ್ತದೆ. ಇದೇ ಕಾರಣಕ್ಕೆ ಮಲೆನಾಡಿನ ಈ ಪುಟ್ಟ ಜಿಲ್ಲೆ ಪ್ರವಾಸಿ ಆಕರ್ಷಣೆಯ ಪ್ರಮುಖ ಕೇಂದ್ರವಾಗಿ ದೇಶ, ವಿದೇಶದಲ್ಲಿ ಗುರುತಿಸಿಕೊಂಡಿದೆ. ಪ್ರತಿ ವರ್ಷವೂ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ. ಪ್ರವಾಸೋದ್ಯಮ ಈಗ ಜಿಲ್ಲೆಯ ಬಹುದೊಡ್ಡ ಆದಾಯದ ಮೂಲವೂ ಆಗಿದೆ. ಇದರ ಜತೆಗೆ ಅನೇಕ ಸಮಸ್ಯೆಗಳ ಸೃಷ್ಟಿಗೂ ಕಾರಣವಾಗಿರುವ ಆರೋಪ ಪ್ರವಾಸೋದ್ಯಮದ ಮೇಲೆ ಇದೆ. ಇದರಲ್ಲಿ ತ್ಯಾಜ್ಯ ವಿಲೇವಾರಿಯೂ ಒಂದು.
ಜಿಲ್ಲೆಯಲ್ಲಿರುವ ಪೌರಾಡಳಿತ ಮತ್ತು ಗ್ರಾಮಾಡಳಿತ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ನಿರ್ವಹಣೆಯ ಸವಾಲು ದೊಡ್ಡದಾಗಿ ಬೆಳೆಯುತ್ತಿದೆ. ಪ್ರವಾಸಿಗರು ಮಾತ್ರವಲ್ಲದೆ ಸ್ಥಳೀಯರ ಪಾಲು ಇದರಲ್ಲಿದೆ. ಮಡಿಕೇರಿಯ ಸುಬ್ರಹ್ಮಣ್ಯ ನಗರದಲ್ಲಿನ ಸ್ಟೋನ್‌ಹಿಲ್‌ನಲ್ಲಿ ಬೆಳೆದು ನಿಂತಿರುವ ಕಸದ ಬೆಟ್ಟವೇ ಇದಕ್ಕೆ ಸಾಕ್ಷಿ. ಆರಂಭದಲ್ಲೇ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿದ್ದರೆ ಈ ಸಮಸ್ಯೆ ಇಷ್ಟರ ಮಟ್ಟಿಗೆ ಬೆಳೆಯಲು ಅವಕಾಶ ಆಗುತ್ತಿರಲಿಲ್ಲ. ಮಡಿಕೇರಿ ಮಾತ್ರವಲ್ಲದೆ ಜಿಲ್ಲೆಯ ಪ್ರಮುಖ ನಗರಗಳೂ ಇಂಥ ಸಮಸ್ಯೆ ಎದುರಿಸುತ್ತಿದೆ.
ಹೀಗೆ ಸಂಗ್ರಹವಾಗಿರು ತ್ಯಾಜ್ಯವನ್ನು ಪಾರಂಪರಿಕ ಕಸ ಎಂದು ಗುರುತಿಸಲಾಗಿದ್ದು, ಜಿಲ್ಲೆಯಲ್ಲಿ 'ಪಾರಂಪರಿಕ ತ್ಯಾಜ್ಯ' ತೆರವು ಮಾಡುವ ಒಟ್ಟು 12.39 ಕೋಟಿ ರೂ. ಮೊತ್ತದ ಯೋಜನೆಗೆ ಚಾಲನೆ ಸಿಕ್ಕಿದೆ. ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದ್ದು, ಮಡಿಕೇರಿ ಸ್ಟೊನ್ ಹಿಲ್‌ನಲ್ಲಿ ಸಂಗ್ರಹವಾಗಿರುವ ಅಂದಾಜು 76,636 ಮೆಟ್ರಿಕ್ ಟನ್ ಕಸ ವಿಲೇವಾರಿಗೆ 5.44 ಕೋಟಿ ರೂ., ಕುಶಾಲನಗರ ಪುರಸಭೆಗೆ ಸಂಬAಧಿಸಿದ ತ್ಯಾಜ್ಯ ಕಣಿವೆ ಸಮೀಪದ ಭುವನಗಿರಿಯಲ್ಲಿ ಸುಮಾರು 41,014 ಮೆಟ್ರಿಕ್ ಟನ್ ಸಂಗ್ರಹವಾಗಿದ್ದು, ಇದರ ವಿಲೇವಾರಿಗೆ 2.91 ಕೋಟಿ ರೂ. ಹಾಗೂ ವಿರಾಜಪೇಟೆ ಪುರಸಭೆಗೆ ಸಂಬAಧಿಸಿದ ತ್ಯಾಜ್ಯ ಸುಮಾರು 34,804 ಮೆಟ್ರಿಕ್ ಟನ್‌ಗಳಷ್ಟು ಆರ್ಜಿ ಗ್ರಾಮದಲ್ಲಿ ಸಂಗ್ರಹವಾಗಿದ್ದು, ಈ ತ್ಯಾಜ್ಯ ವಿಲೇವಾರಿಗೆ 2.47 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲೂ ಇಂಥ ಸಮಸ್ಯೆ ಇದ್ದು, ಅಲ್ಲೂ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆ. ಕೆಲವು ಗ್ರಾಮಗಳಲ್ಲಂತೂ ತ್ಯಾಜ್ಯ ವಿಲೇವಾರಿಗೂ ಜಾಗ ಇಲ್ಲದಂಥ ಸ್ಥಿತಿ ಇದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕೊಡಗಿನಲ್ಲಿ ಈವರೆಗೆ ಸ್ವಚ್ಛತೆ ಕೇವಲ ಘೋಷಣೆಯಾಗಿ ಮಾತ್ರ ಉಳಿದಿತ್ತು. ಆದರೆ ಈ ವರ್ಷ ನೂತನವಾಗಿ ಕಸ ವಿಂಗಡಣೆ ಮಾಡಿ ವಿಲೇವಾರಿ ಮಾಡುವ ಘಟಕವೇ ಆರಂಭವಾಗಿದೆ. ಆ ಘಟಕ ಸರಿಯಾದ ರೀತಿ ಕೆಲಸ ನಿರ್ವಹಿಸಿದರೆ ಕೊಡಗು ಜಿಲ್ಲೆ ಕಸಮುಕ್ತವಾಗಿ ಸ್ವಚ್ಛ ಪರಿಸರ ಲಭಿಸುತ್ತದೆ. ಆದರಿಂದ ಸಂಬAಧಪಟ್ಟ ಅಧಿಕಾರಿಗಳು ಘಟಕದ ಮೇಲೆ ನಿಗಾ ಇಟ್ಟು ಆದಷ್ಟು ಬೇಗ ಕಾರ್ಯ ಆರಂಭ ಮಾಡಬೇಕಿದೆ.
ಬಿ. ಜಲೀಲ್, ಆಂಬಟ್ಟಿ, ವಿರಾಜಪೇಟೆ
ಕೊಡಗಿನಲ್ಲಿ ಸ್ವಚ್ಛತೆ ಕೆಲವು ಕಡೆ ಸಮರ್ಪಕವಾಗಿ ನಡೆದರೂ ಸಂಗ್ರಹವಾದ ತ್ಯಾಜ್ಯ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಕೇವಲ ಕಸ ಸಂಗ್ರಹಿಸಿ ಇಡಲಾಗುತ್ತಿದೆ ಹೊರತೂ ಕಸ ವಿಲೇವಾರಿ ಆಗುತ್ತಿಲ್ಲ. ಇದೀಗ ಕಸ ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಇದಕ್ಕೆ ಸಂಬAದ ಪಟ್ಟ ಇಲಾಖೆ, ಜನ ಪ್ರತಿನಿಧಿಗಳು ಮುತುವರ್ಜಿಯಿಂದ ಗಮನ ಹರಿಸಿ ಕಸ ತೆರವು ಕಾರ್ಯ ನಡೆಸಬೇಕು.
ಎನ್.ಆರ್. ಕಾವ್ಯಾ, ಕೆ. ಬೋಯಿಕೇರಿ, ವಿರಾಜಪೇಟೆ
ಸಿದ್ದಾಪುರ, ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದ ಕಾರಣ ಸಮಸ್ಯೆ ಹೆಚ್ಚಾಗುತ್ತಿದೆ. ಸಿದ್ದಾಪುರ ಪಟ್ಟಣ ಹಾಗೂ ರಸ್ತೆ ಬದಿಯಲ್ಲಿ ಕಸ ಸುರಿಯುತ್ತಿದ್ದು ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯೂ ಶೀಘ್ರ ಶಾಶ್ವತ ಜಾಗದ ವ್ಯವಸ್ಥೆ ಮಾಡಬೇಕಾಗಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಆಗಬೇಕಿದೆ.
ವಿನಿಲ್, ಜನಪರ ಸಂಘ ಕಾರ್ಯದರ್ಶಿ, ಮಾಲ್ದಾರೆ
ಸೋಮವಾರಪೇಟೆ ತಾಲೂಕಿನ ಕೆಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇದೆ. ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪನೆ ಯಾಗಬೇಕು. ಸರ್ಕಾರ ಸೂಕ್ತ ಅನುದಾನ ಕೊಡಬೇಕು. ಜನಸಾಮಾನ್ಯರು ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿಯಬಾರದು. ಜಿಲ್ಲಾಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕು. ಜನರಲ್ಲೂ ಜಾಗೃತಿ ಮೂಡಿಸಬೇಕು
ವೈ.ಎಸ್. ಸತೀಶ, ಕೃಷಿಕ, ಯಡೂರು, ಸೋಮವಾರಪೇಟೆ
ಪ್ರತಿ ಗ್ರಾಮ ಗ್ರಾಮಗಳಲ್ಲಿಯೂ ಕಸ ಉತ್ಪತಿ ಆಗುತ್ತಲೇ ಇರುತ್ತದೆ. ಜಿಲ್ಲಾಡಳಿತ ಇದನ್ನು ಸಪರ್ಪಕವಾಗಿ ವಿಲೇವಾರಿ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಮಡಿಕೇರಿಯಲ್ಲಿ ಘಟಕ ನಿರ್ಮಾಣ ಆದ ಮೇಲೆ ಜಿಲ್ಲೆಯ ಇತರ ಕಡೆಗಳಿಂದಲೂ ವ್ಯವಸ್ಥಿತವಾಗಿ ಕಸ ಸಂಗ್ರಹ ಮಾಡಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರೆ ಉತ್ತಮ.
ನಾಟೋಳಂಡ ಗಿರೀಶ್, ಗೋಣಿಕೊಪ್ಪಲು ನಿವಾಸಿ
ಪಾರಂಪಾರಿಕ ಕಸ ನಿರ್ವಹಣಾ ಘಟಕ ಸ್ಥಾಪನೆ ಸ್ವಾಗತಾರ್ಹ. ಆದಷ್ಟು ಬೇಗ ಇದು ಚಾಲನೆಗೆ ಬಂದರೆ ಒಳಿತು. ಇದು ಕೇವಲ ಮಡಿಕೇರಿಗೆ ಮಾತ್ರ ಅಲ್ಲದೆ ಕೊಡಗಿನ ಎಲ್ಲಾ ಮುಖ್ಯ ಪಟ್ಟಣಕ್ಕೂ ವಿಸ್ತರಣೆ ಆಗಬೇಕು. ವೈಜ್ಞಾನಿಕವಾಗಿ ಕಸ ಸಂಗ್ರಹ ಮತ್ತು ವಿಲೇವಾರಿ ಆಗಬೇಕು.
ವಾಣಿ ಧನೇಶ್, ಗೋಣಿಕೊಪ್ಪಲು ನಿವಾಸಿ
ತ್ಯಾಜ್ಯ ವಿಲೇವಾರಿ ಸಮಸ್ಯೆ ಅನೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇದ್ದು, ಇದರ ನಿವಾರಣೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದರೂ ಅದು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಕೆಲ ನಗರದ ಬಸ್ ನಿಲ್ದಾಣದಲ್ಲಿ ಮಾತ್ರ ಕಸ ಬಿದ್ದ ತಕ್ಷಣ ತೆರವುಗೊಳಿಸಲು ಕಾರ್ಮಿಕರನ್ನು ನೇಮಿಸಿರುವುದು ಬಿಟ್ಟರೆ, ಗ್ರಾಮೀಣ ಭಾಗದ ಕಸಗಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಹರಡಿರುತ್ತದೆ, ಸಾರ್ವಜನಿಕರು ಸಹ ಕಸ ಹಾಕಬಾರದು, ಎಲ್ಲವನ್ನೂ ಸರ್ಕಾರ ಮಾಡಲಿ ಎಂದು ಕಾಯಬಾರದು. ಸ್ವಚ್ಛ ಕೊಡಗು ಮಾಡುವುದು ನಮ್ಮ ಜವಾಬ್ದಾರಿ.
ಫ್ರಾನ್ಸಿಸ್ ಡಿಸೋಜ, ಅಧ್ಯಕ್ಷ, ಕರ್ನಾಟಕ ರಕ್ಷಣ ವೇದಿಕೆ ಸೋಮವಾರಪೇಟೆ ತಾಲೂಕು ಘಟಕ
ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ ಸ್ಥಳೀಯಾಡಳಿತಗಳು ಮುಂದಾಗಿರುವುದು ಸ್ವಾಗತಾರ್ಹ. ಸ್ಥಳೀಯ ಆಡಳಿತಗಳ ಮುಖಾಂತರ ಸಂಗ್ರಹವಾಗುವ ತ್ಯಾಜ್ಯ 'ಪಾರಂಪರಿಕ ತ್ಯಾಜ್ಯ' ತ್ಯಾಜ್ಯ ಆಗಿ ಪರಿವರ್ತನೆ ಆಗದಂತೆ ತಡೆಯುವಲ್ಲಿ ಜನಸಾಮಾನ್ಯರೂ ಕಾಳಜಿ ತೋರಿಸಬೇಕು. ಮನೆ, ಹೊಟೇಲ್, ಉದ್ದಿಮೆಗಳಲ್ಲಿ ಸಂಗ್ರಹವಾಗುವ ಕಸ ಸ್ಥಳೀಯ ಆಡಳಿತದ ಕಸ ಸಂಗ್ರಹದ ವಾಹನಕ್ಕೆ ಕೊಡುವುದಕ್ಕೂ ಮೊದಲು ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಮಾಡಿದರೆ ಬಹುತೇಕ ಸಮಸ್ಯೆಗೆ ಪರಿಹಾರ ಸಿಗಲಿದೆ. ಹಸಿ ಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಕೊಡುವುದರಿಂದ ಪೌರ ಕಾರ್ಮಿಕರ ಕೆಲಸವೂ ಸುಲಭ ಆಗಲಿದೆ.
ಎಂ. ಕೃಷ್ಣ, ಅಧ್ಯಕ್ಷ, ಕರ್ನಾಟಕ ಕಾವಲು ಪಡೆ, ಕೊಡಗು ಘಟಕ
ಮಡಿಕೇರಿ ಸ್ಟೋನ್ ಹಿಲ್‌ನಲ್ಲಿ ಸಂಗ್ರಹವಾಗಿರುವ ಕಸ ತೆರವಿಗೆ 9 ತಿಂಗಳ ಗುರಿ ನಿಗದಿಪಡಿಸಲಾಗಿದೆ. ಸುಮಾರು 76,636 ಮೆಟ್ರಿಕ್ ಟನ್ ಕಸ ಅಲ್ಲಿ ಸಂಗ್ರಹವಾಗಿರುವುದಾಗಿ ಅಂದಾಜಿಸಲಾಗಿದೆ. ಜೂನ್‌ನಲ್ಲಿ ಮಳೆ ಶುರುವಾಗುವುದರಿಂದ ಇನ್ನು 2 ತಿಂಗಳಲ್ಲಿ ಗರಿಷ್ಠ ಪ್ರಮಾಣದ ತ್ಯಾಜ್ಯವನ್ನು ಅಲ್ಲಿಂದ ತೆರವು ಮಾಡಬೇಕಿದೆ. ಹಾಗಾಗಿ ಆದಷ್ಟು ಶೀಘ್ರ ಕಸವನ್ನು ಅಲ್ಲಿಂದ ಖಾಲಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.
ಹೆಚ್. ಆರ್. ರಮೇಶ್, ಪೌರಾಯುಕ್ತ, ಮಡಿಕೇರಿ ನಗರಸಭೆ