ಜಿಲ್ಲೆ

ಸ್ಥಗಿತಗೊಳ್ಳುವುದಿಲ್ಲ ಗ್ಯಾರಂಟಿ ಯೋಜನೆ : ಅನುಷ್ಠಾನ ಸಮಿತಿ ಅಧ್ಯಕ್ಷ ರೇವಣ್ಣ ಸ್ಪಷ್ಟನೆ

ಬಾಬುರಾವ ಯಡ್ರಾಮಿ

ವಡಗೇರಾದಲ್ಲಿ ತಾಪಂನಲ್ಲಿ ಅಧಿಕಾರಿಗಳ ಸಭೆ : ಯೋಜನೆಗಳು ಪ್ರಗತಿಯ ಯಶಸ್ಸು ಕಂಡಿವೆ

ವಿಜಯವಾಣಿ ಸುದ್ದಿಜಾಲ ವಡಗೇರಾ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಗ್ಯಾರಂಟಿ ಯೋಜನೆ ಅನುಷ್ಠಾ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸ್ಪಷ್ಟಪಡಿಸಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡ ಯಾದಗಿರಿ ಜಿಪಂ ಹಾಗೂ ವಡಗೇರಾ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಈ ಯೋಜನೆಗಳು ತುಂಬಾ ಸಹಕಾರಿಯಾಗಿವೆ. ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ಜಾರಿಗೆ ತರುವ ಮೂಲಕ ನುಡಿದಂತೆ ನಡೆಯುತ್ತಿದೆ. ಮುಂದೆಯೂ ಕೂಡ ಈ ಯೋಜನೆ ಸ್ಥಗಿತಗೊಳಿಸುವ ಯಾವುದೇ ಇರಾದೆ ಇಲ್ಲ ಎಂದರು.

ಈಗಾಗಲೇ ಈ ಯೋಜನೆಗಳು ಪ್ರಗತಿಯ ಯಶಸ್ಸು ಕಂಡಿವೆ. ಇವು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ನಮ್ಮ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆ ಹಾಗೂ ಪ್ರತಿ ತಿಂಗಳು ಗೃಹಲಕ್ಷಿö್ಮ ಯೋಜನೆಯಡಿ ಎರಡು ಸಾವಿರ ರೂ. ಮತ್ತು ಯುವಕರಿಗೆ ಯುವನಿಧಿ, ಬಡವರಿಗೆ ೨೦೦ ಯೂನಿಟ್ ಉಚಿತ ವಿದ್ಯುತ್, ಬಿಪಿಎಲ್ ಕುಟುಂಬದವರಿಗೆ ಅಕ್ಕಿ ಜತೆಗೆ ನಗದು ಹಣ ನೀಡುವ ಮೂಲಕ ನಮ್ಮ ಗ್ಯಾರಂಟಿಗಳು ಬಡವರ ಬದುಕಿಗೆ ಬೆಳಕಾಗಿವೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಗ್ಯಾರಂಟಿ ಯೋಜನೆಗಳು ನಿಲ್ಲಿಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಯಾವುದೇ ಉಹಾಪೋಹಗಳಿಗೆ ಕಿವಿಗೊಡಬಾರದು. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದು ಹೇಳಿದರು.

ಈ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಗಾಗಿ ಜಾರಿಗೆ ತರಲು ಯೋಜನೆಯ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು, ಸದಸ್ಯರು ಶ್ರಮವಹಿಸಬೇಕು. ಅಲ್ಲದೆ ಫಲಾನುಭವಿಗಳ ಮನೆ ಮನೆಗೆ ಭೇಟಿ ನೀಡಿ ಯೋಜನೆ ಕುರಿತು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಅಧಿಕಾರಿಗಳು ಸರ್ಕಾರದ ಈ ಯೋಜನೆಗಳಿಗೆ ನಿರ್ಲಕ್ಷÈ ವಹಿಸದೆ ಸರಿಯಾಗಿ ಸಾರ್ವಜನಿಕರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು. ಒಂದು ವೇಳೆ ನಿರ್ಲಕ್ಷÈ ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಶ್ರೇಣಿಕಕುಮಾರ್ ಧೂಕಾ, ತಾಲೂಕಾಧ್ಯಕ್ಷ ಖಾಜಾಮೈನುದ್ದೀನ್ ಮಿರ್ಚಿ ನಾಯ್ಕಲ್, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ತಹಸೀಲ್ದಾರ್ ಶ್ರೀನಿವಾಸ್ ಚಾಪೆಲ್, ಇಒ ಮಲ್ಲಿಕಾರ್ಜುನ ಸಂಗ್ವಾರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರಿದ್ದರು.