ಮುಂಡರಗಿ: ಧಾರವಾಡ ಕೃಷಿ ವಿಶ್ವ ವಿದ್ಯಾಲಯದಿಂದ ಕೊಡಲ್ಪಡುವ ಗದಗ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿಗೆ ತಾಲೂಕಿನ ಹೆಸರೂರ ಗ್ರಾಮದ ಪ್ರಗತಿಪರ ರೈತ ಗರಡಪ್ಪ ಜಂತ್ಲಿ ಅವರು ಭಾಜನರಾಗಿದ್ದು, ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಸೆ.15ರಂದು ಬೆಳಗ್ಗೆ 10:30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕೂಡು ಕುಟುಂಬದ ಪ್ರಗತಿಪರ ರೈತ ಗರಡಪ್ಪ ಅವರು ಹೆಸರೂರಿನಲ್ಲಿ 31ಎಕರೆ ಜಮೀನು ಹೊಂದಿದ್ದು, 8 ಎಕರೆ ದ್ರಾಕ್ಷಿ, 8 ಎಕರೆ ಬಾಳೆ, 2 ಎಕರೆ ಅಡಕೆ, 13 ಎಕರೆ ಗೋವಿನಜೋಳ ಬೆಳೆ ಬೆಳೆದಿದ್ದಾರೆ. ಜಮೀನಿನಲ್ಲಿ ಬೋರ್‌ವೆಲ್ ವ್ಯವಸ್ಥೆಯ ಜೊತೆಗೆ ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ಅವರದ್ದೆ ಜಮೀನಿನಲ್ಲಿರುವ 1ಎಕರೆ ಕೆರೆಗೆ ನೀರು ಪೂರೈಸಿ ಅಲ್ಲಿಂದ ಬೆಳೆಗಳಿಗೆ ನೀರುಣಿಸುತ್ತಾರೆ. ಗರಡಪ್ಪ ಅವರು ಈಹಿಂದೆ ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕೆ ಕೃಷಿಕ ಪ್ರಶಸ್ತಿ ಸಹ ಪಡೆದಿದ್ದರು. ಪ್ರಗತಿಪರ ರೈತ ಗರಡಪ್ಪ ಅವರ ಕೃಷಿ ಕಾಯಕ ಕುರಿತು ‘ವಿಜಯವಾಣಿ’ಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.