ಬೆಳಗಾವಿ: ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ವೈರಾಣು ಹರಡದಂತೆ ಮುಂಜಾಗ್ರತೆ ವಹಿಸಿ ಕೈಗಾರಿಕೆಗಳನ್ನು ಆರಂಭಿಸಬಹುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.
ನಗರದ ಉದ್ಯಮಭಾಗದಲ್ಲಿ ಶನಿವಾರ ಜಿಲ್ಲಾ ಕೈಗಾರಿಕೆ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕೈಗಾರಿಕೋದ್ಯಮಿಗಳ ಸಭೆ ಉದ್ದೇಶಿಸಿ ಮಾತನಾಡಿದರು.
ಜಗತ್ತನ್ನು ಕಾಡುತ್ತಿರುವ ಕರೊನಾ ಮಹಾಮಾರಿ ವಿರುದ್ಧ ಸಮರ ಸಾರಬೇಕಾದ ಅಗತ್ಯವಿದೆ. ಕರೊನಾ ತಂದೊಡ್ಡಿರುವ ಸವಾಲನ್ನು ಸಮರ್ಥವಾಗಿ ಎದುರಿಸಬೇಕು. ಆ ನಿಟ್ಟಿನಲ್ಲಿ ವೆಂಟಿಲೇಟರ್ ಉತ್ಪಾದನೆ, ಸ್ಯಾನಿಟೈಸರ್, ಹ್ಯಾಂಡ್‌ವಾಷ್, ಮಾಸ್ಕ್ ಉತ್ಪಾದನೆ, ಆಹಾರ ಸಾಮಗ್ರಿಗಳ ಸಂಸ್ಕರಣ ಘಟಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ವಿಪುಲ ಅವಕಾಶಗಳಿವೆ ಎಂದರು.
ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಕರೊನಾ ರೋಗ ಹರಡದಂತೆ ಕೈಗಾರಿಕೆಗಳ ಮಾಲೀಕರೇ ಅಗತ್ಯ ಕ್ರಮ ಅನುಸರಿಸಬೇಕು. ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸರ್ವೋ ಕಂಟ್ರೋಲ್‌ನ ದೀಪಕ ಧಡೂತಿ ಮಾತನಾಡಿ, ತಾವು ವೆಂಟಿಲೇಟರ್ ಉತ್ಪಾದನೆಗೆ ಚಿಂತನೆ ನಡೆಸಿದ್ದು, ಅದಕ್ಕೆ ತಾವು ಸಹಾಯ-ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕೆಲ ಉದ್ಯಮಿಗಳು, ಶೇ.50ರಷ್ಟು ಆದಾಯ ತೆರಿಗೆ ಭರಿಸುವುದನ್ನು ಕಡಿಮೆ ಮಾಡಿ, ಜಿಎಸ್‌ಟಿಯಲ್ಲಿ ವಿನಾಯಿತಿ ನೀಡಲು ಕ್ರಮ ಕೈಗೊಳ್ಳಬೇಕು. ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಅಂತರ್ ಜಿಲ್ಲಾ ಓಡಾಟಕ್ಕೆ ಅವಕಾಶವಿಲ್ಲ: ಕರೊನಾ ವೈರಾಣು ಹರಡುತ್ತಿರುವುದರಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವಾಹನಗಳ ಒಡಾಟಕ್ಕೆ ಅವಕಾಶ ನೀಡುವುದಿಲ್ಲ. ಇದರಿಂದ ರೋಗ ಹರಡಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ದೇಶದ ಜನತೆಯ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಲಾಕ್‌ಡೌನ್ ಕರೆಗೆ ತಾವು ಸ್ಪಂದಿಸಬೇಕು ಸಚಿವ ಸುರೇಶ ಅಂಗಡಿ ಸೂಚನೆ ನೀಡಿದರು. ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಕೈಗಾರಿಕೋದ್ಯಮಿಗಳು ಇದ್ದರು.
ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಆಹಾರ ಸಾಮಗ್ರಿ ಅಥವಾ ರೈತರು ಬೆಳೆದ ತರಕಾರಿ, ವಿವಿಧ ಹಣ್ಣುಗಳು, ಸಾಗಣೆ ಮಾಡುವುದಕ್ಕಾಗಿ ಕಿಸಾನ್ ರೈಲು ಆರಂಭಿಸಲಾಗುವುದು. ಬೇಡಿಕೆಗೆ ಅನುಗುಣವಾಗಿ ರೈಲ್ವೆ ಇಲಾಖೆ ವರ್ತಕರಿಗೆ ಅತ್ಯವಶ್ಯಕವಾಗಿರುವ ಸೌಲಭ್ಯವನ್ನು ಒದಗಿಸಲಿದೆ ಎಂದು ಸಚಿವರು ಹೇಳಿದರು.