ಜಿಲ್ಲೆ

ಪಿಎಚ್‌ಒಗೆ ಆಗಬೇಕಿದೆ ಮೇಜರ್ ಸರ್ಜರಿ! : ಗಂಜೀಮಠ ಆರೋಗ್ಯ ಕೇಂದ್ರಕ್ಕೆ ಇನ್ನೂ ಸಿಗದ ಮೇಲ್ದರ್ಜೆಗೇರುವ ಭಾಗ್ಯ : ಸರ್ಕಾರದಿಂದಿಲ್ಲ ಸೂಕ್ತ ಪ್ರತಿಕ್ರಿಯೆ

ಧನಂಜಯ ಗುರುಪುರ

ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗಂಜಿಮಠ ಜಂಕ್ಷನ್‌ನಿಂದ ಅನತಿ ದೂರದಲ್ಲಿ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಒ) ಇದ್ದು, ವ್ಯಾಪ್ತಿ ಪ್ರದೇಶದ ಜನಸಂಖ್ಯೆ ಅನ್ವಯ ಇದು ಮೇಲ್ದರ್ಜೆಗೇರಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿಗಳ ಗ್ರಾಮಸಭೆಗಳಲ್ಲಿ ಹಲವು ಬಾರಿ ನಿರ್ಣಯ ತೆಗೆದುಕೊಳ್ಳಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ತುರ್ತು ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಈ ಭಾಗದ ಜನರು ಮೂಡುಬಿದಿರೆ ಅಥವಾ ಮಂಗಳೂರಿನತ್ತ ಮುಖ ಮಾಡುವುದು ಇನ್ನೂ ತಪ್ಪಿಲ್ಲ.

5 ಉಪ ಆರೋಗ್ಯ ಕೇಂದ್ರ: ಜೆ.ಕೃಷ್ಣ ಪಾಲೆಮಾರ್ ಸಚಿವರಾಗಿದ್ದ ವೇಳೆ ಗಂಜಿಮಠ ಪಿಎಚ್‌ಒ ಮೇಲ್ದರ್ಜೆಗೇರಿಸುವಂತೆ ಬೇಡಿಕೆ ಸಲ್ಲಿಸಲಾಗಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ. ಗಂಜಿಮಠ, ಗುರುಪುರ ಮತ್ತು ಮುತ್ತೂರು ಗ್ರಾಪಂನ ಕೆಲವು ಭಾಗಗಳ ವ್ಯಾಪ್ತಿ ಹೊಂದಿರುವ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ ಅಡ್ಡೂರು, ಬಡಗುಳಿಪಾಡಿ, ಮೊಗರು, ತೆಂಕುಳಿಪಾಡಿ ಮತ್ತು ಮೂಳೂರು ಎಂಬ 5 ಉಪಆರೋಗ್ಯ ಕೇಂದ್ರ ಹೊಂದಿದೆ.

ಸೋರುತ್ತಿದೆ ಕಟ್ಟಡ: 1962ರಲ್ಲಿ ಸ್ಥಾಪನೆಗೊಂಡ ಗಂಜಿಮಠ ಪಿಎಚ್‌ಒ ತೀರ ಹಳೆಯ ಕಟ್ಟಡ ಹೊಂದಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ಹಲವು ಬಾರಿ ಸಾಮಾನ್ಯ ದುರಸ್ತಿ ಮಾಡಲಾಗಿದ್ದರೂ ಈವರೆಗೆ ಸರ್ಕಾರದಿಂದ ಹೊಸ ‘ಕಟ್ಟಡ ಭಾಗ್ಯ’ ಬಂದಿಲ್ಲ. ಪಿಎಚ್‌ಒ ಸುಮಾರು 2 ಎಕರೆಗೂ ಹೆಚ್ಚು ಜಾಗ ಒಳಗೊಂಡಿದೆ. ಇಲ್ಲಿ ಪ್ರಸ್ತುತ ಓರ್ವ ವೈದ್ಯ, ಓರ್ವ ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಶಿಯನ್ ಹಾಗೂ ಗುತ್ತಿಗೆ ಆಧರಿತ ಓರ್ವ ಫಾರ್ಮಾಸಿಸ್ಟ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸುಸಜ್ಜಿತ ಆಸ್ಪತ್ರೆಗಳಿಲ್ಲ: ಪ್ರಸ್ತುತ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 30-35 ಸಾವಿರ ಜನಸಂಖ್ಯೆ ಇದೆ. ಇಲ್ಲಿ ಈ ಕೇಂದ್ರದ ಮೂಲಕ ಹೇಳಿಕೊಳ್ಳುವ ಆರೋಗ್ಯ ಸವಲತ್ತುಗಳಿಲ್ಲ. ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧ, ಮರಣೋತ್ತರ ಪರೀಕ್ಷೆಗಳು ನಡೆಯುತ್ತವೆ. ಹಿಂದೆ ಇಲ್ಲಿ ಸಂತಾನ ಶಕ್ತಿ ಹರಣ ಚಿಕಿತ್ಸೆ ಲಭ್ಯವಿತ್ತು. ಈ ಭಾಗದಲ್ಲಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಸುಸಜ್ಜಿತ ಆಸ್ಪತ್ರೆಗಳಿಲ್ಲ. ಎಡಪದವಿನಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಿಸಬೇಕೆಂದು ಪಂಚಾಯಿತಿ ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅದೇ ರೀತಿ ಗಂಜಿಮಠ ಪಂಚಾಯಿತಿ ಗ್ರಾಮಸಭೆಗಳಲ್ಲಿಯೂ ಗಂಜಿಮಠ ಪಿಎಚ್‌ಒ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಸರ್ಕಾರದಿಂದ ಈವರೆಗೆ ಮೇಲ್ದರ್ಜೆ ಭಾಗ್ಯದ ಬಗ್ಗೆ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ.

ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ ವಿಶಾಲ ಜಾಗ ಹೊಂದಿದೆ. ಆಧುನಿಕ ಆಶೋತ್ತರಗಳಿಗೆ ತಕ್ಕಂತೆ ಇಲ್ಲಿ ಹೊಸ ಕಟ್ಟಡದೊಂದಿಗೆ ಕೇಂದ್ರಕ್ಕೆ ಕಾಯಕಲ್ಪ ನೀಡಿದರೆ ವ್ಯಾಪ್ತಿ ಪ್ರದೇಶದ ಜನರಿಗೆ ತುಂಬ ಅನುಕೂಲವಾಗಲಿದೆ. ಕೇಂದ್ರದ ವ್ಯಾಪ್ತಿಯಲ್ಲಿ ಹೆಚ್ಚಿದ ಜನಸಂಖ್ಯೆ ಮತ್ತು ಹತ್ತಿರದಲ್ಲಿ ಸಾರ್ವಜನಿಕ ಆಸ್ಪತ್ರೆಗಳ ಕೊರತೆ ಪರಿಗಣಿಸಿ ಗಂಜಿಮಠ ಆರೋಗ್ಯ ಕೇಂದ್ರ ಮೇಲ್ದರ್ಜೆರಿಸಬೇಕು. ಆದರೆ ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಕಾಡುತ್ತಿರುವಂತಿದೆ.

ಮಂಗಳೂರು ಉತ್ತರ ಕ್ಷೇತ್ರದ ಸುರತ್ಕಲ್ ಮತ್ತು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆರಿಸುವಂತೆ ಸರ್ಕಾರದ ಆರೋಗ್ಯ ಇಲಾಖೆ ಮತ್ತು ಸಚಿವರಿಗೆ ಪತ್ರ ಬರೆದಿದ್ದೇನೆ. ವಿಧಾನಸಭೆಯಲ್ಲೂ ಈ ವಿಷಯ ಪ್ರಸ್ತಾವಿಸಿದ್ದೇನೆ. ಈವರೆಗೆ ಸೂಕ್ತ ಉತ್ತರ ಸಿಕ್ಕಿಲ್ಲ. ಬೇಡಿಕೆ ಮೇಲಿನ ಪ್ರಯತ್ನ ಮುಂದುವರಿಯಲಿದೆ. ಡಾ.ಭರತ್ ಶೆಟ್ಟಿ ಮಂಗಳೂರು ಉತ್ತರ ಶಾಸಕ ಹಿಂದೊಮ್ಮೆ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆರಿಸುವ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಈಗ ಸರ್ಕಾರ ಆರೋಗ್ಯ ಕೇಂದ್ರಗಳ ಉನ್ನತೀಕರಣದ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಲು ನಿರ್ದೇಶಿಸಿದೆ. ಅದರಂತೆ ಗಂಜಿಮಠ ಆರೋಗ್ಯ ಕೇಂದ್ರ ಮೇಲ್ದರ್ಜೆರಿಸುವ ಅಥವಾ ಮಾಡರ್ನ್ ಆಸ್ಪತ್ರೆಯಾಗಿ ಉನ್ನತೀಕರಿಸುವ ಬಗ್ಗೆ ಮರು ಪ್ರಸ್ತಾವ ಸಲ್ಲಿಸಲಾಗುವುದು. ಡಾ.ಎಚ್.ಆರ್.ತಿಮ್ಮಯ್ಯ ದ.ಕ. ಜಿಲ್ಲಾ ಆರೋಗ್ಯಧಿಕಾರಿ ಗಂಜಿಮಠ ಆರೋಗ್ಯ ಕೇಂದ್ರ ಮೇಲ್ದರ್ಜೆರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾಗ ಗಂಜಿಮಠ ಪಿಎಚ್‌ಒಗೆ ಭೇಟಿ ನೀಡಿದ್ದು, ಅವರಲ್ಲೂ ಈ ವಿಷಯ ಪ್ರಸ್ತಾವಿಸಿದ್ದೇವೆ. ಹಾಗಾಗಿ ಸ್ಥಳೀಯರ ಬೇಡಿಕೆ ಶೀಘ್ರ ಈಡೇರುವ ಭರವಸೆ ಇದೆ. ಜನಸಂಖ್ಯೆ ಆಧರಿಸಿ ಅಥವಾ ಸುಮಾರು 15-20 ಕಿಮೀ ಅಂತರದಲ್ಲಿ ಸರ್ಕಾರಿ ಆಸ್ಪತ್ರೆಗಳಿಲ್ಲದ ಕಾರಣ, ಈ ಭಾಗದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಅಗತ್ಯವಿದೆ ಮಾಲತಿ ಅಧ್ಯಕ್ಷೆ, ಗಂಜಿಮಠ ಗ್ರಾಪಂ ವ್ಯಾಪ್ತಿ ಪ್ರದೇಶದಲ್ಲಿ ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿ ಸರ್ಕಾರಿ ಆಸ್ಪತ್ರೆ ಅವಶ್ಯಕತೆ ಕಂಡು ಬರುತ್ತಿದೆ. ಪ್ರಸಕ್ತ ಕೇಂದ್ರ ಉನ್ನತೀಕರಿಸುವಲ್ಲಿ ಜಾಗದ ಕೊರತೆ ಇಲ್ಲ. ವ್ಯಾಪ್ತಿ ಪ್ರದೇಶದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಸ್ಥಾಪನೆಯಾದರೆ ಜನರಿಗೆ ಹತ್ತಿರದಲ್ಲಿ ಆರೋಗ್ಯ ಸೇವೆ ಲಭಿಸಿದಂತಾಗುತ್ತದೆ. ಡಾ.ಅಮಿತ್‌ರಾಜ್ ಗಂಜಿಮಠ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ