ಹನೂರು: ಸಮೀಪದ ಚಂಗವಾಡಿ ಬಸ್ ನಿಲ್ದಾಣದ ಬಳಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಸೋಮವಾರ ರಾತ್ರಿ ಹನೂರು ಪೊಲೀಸರು ಬಂಧಿಸಿದ್ದಾರೆ.
ಹನೂರಿನ ಮಾರುತಿನಗರದಲ್ಲಿ ವಾಸವಾಗಿರುವ ತಾಲೂಕಿನ ದಂಟಳ್ಳಿ ಗ್ರಾಮದ ನಾಗರಾಜು ಆಲಿಯಾಸ್ ಕಿವುಡ (29) ಬಂಧಿತ. ಈತ ಸಂಜೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಸಾಗಿಸುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ 4 ಕೆಜಿ, 725 ಗ್ರಾಂ ಒಣ ಗಾಂಜಾವನ್ನು ವಶಕ್ಕೆ ಪಡೆದರು.
ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಪೊಲೀಸ್ ಸಿಬ್ಬಂದಿ ದೊಡ್ಡವೀರಶೆಟ್ಟಿ, ಕುಮಾರ್, ರಾಘವೇಂದ್ರ, ಪ್ರಭಾಕರ್, ಪ್ರಭು, ಚಂದ್ರಶೇಖರ್ ಹಾಗೂ ಶಿವಕುಮಾರ್ ಭಾಗವಹಿಸಿದ್ದರು.