ಜಿಲ್ಲೆ

ಗಾಂಜಾ ಮಾರಾಟ ಆರೋಪಿ ಕಾಲಿಗೆ ಗುಂಡೇಟು

ಶಿವಮೊಗ್ಗ: ಗಾಂಜಾ ಮಾರಾಟ ಪ್ರಕರಣದ ಪ್ರಮುಖ ಆರೋಪಿ ಭದ್ರಾವತಿ ಅನ್ವರ್ ಕಾಲನಿ ನಿವಾಸಿ ನಸ್ರುಲ್ಲಾ (21) ಎಂಬುವನನ್ನು ಮಂಗಳವಾರ ಬೆಳಗ್ಗೆ ಬಂಧಿಸಲು ಮುಂದಾದ ಹಳೇನಗರ ಠಾಣೆ ಸಬ್‌ಇನ್‌ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡದ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ನಸ್ರುಲ್ಲಾ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಸೋಮವಾರ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ನಾಲ್ವರು ಆರೋಪಿಗಳನ್ನು ಹಳೇನಗರ ಎಸ್‌ಐ ಚಂದ್ರಶೇಖರ ನೇತೃತ್ವದ ತಂಡ ಬಂಧಿಸಿ 1.4 ಕೆಜಿ ಗಾಂಜಾ ವಶಪಡಿಸಿಕೊಂಡಿತ್ತು. ಈ ವೇಳೆ ಪೊಲೀಸರಿಂದ ನಸ್ರುಲ್ಲಾ ತಪ್ಪಿಸಿಕೊಂಡಿದ್ದ

ಆರೋಪಿ ನಸ್ರುಲ್ಲಾ ಅಡಗಿಕೊಂಡಿದ್ದ ಜಾಗದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದರು. ಶರಣಾಗುವ ಬದಲು ಪೊಲೀಸರ ಮೇಲೆಯೇ ಕಂಟ್ರಿ ಪಿಸ್ತೂಲ್ ಹಾಗೂ ಡ್ಯಾಗರ್‌ನಿಂದ ಪ್ರತಿದಾಳಿ ಮಾಡಲು ಮುಂದಾಗಿದ್ದಾನೆ. ಈ ವೇಳೆ ಚಂದ್ರಶೇಖರ್ ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಆತನಿಂದ ಕಂಟ್ರಿ ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸರು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ