ಜಿಲ್ಲೆ

ಮಂಗಳೂರಲ್ಲಿ 200 ಕೆ.ಜಿ. ಗಾಂಜಾ ಪತ್ತೆ

Dakshina Kannada

ಮಂಗಳೂರು: ಆಂಧ್ರಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಗಾಂಜಾ ತಂದು ಕರಾವಳಿ, ಮಲೆನಾಡಿನಲ್ಲಿ ವಿತರಣೆ ಮಾಡುವ ಬೃಹತ್ ಜಾಲವೊಂದನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣ ಸಮೀಪದ ತೂಣಿ ಎಂಬಲ್ಲಿಂದ 200 ಕೆ.ಜಿ.ಯಷ್ಟು ಗಾಂಜಾವನ್ನು ಮೀನು ಸಾಗಿಸುವ ಲಾರಿಯಲ್ಲಿ ತುಂಬಿ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೊಲೀಸರು ಬುಧವಾರ ಮುಂಜಾನೆ ಕರ್ನಾಟಕ-ಕೇರಳ ಗಡಿಭಾಗದ ತಲಪಾಡಿ ಸಮೀಪದ ಒಲವಿನಹಳ್ಳಿ ಕ್ರಾಸ್ ಎಂಬಲ್ಲಿ ಪತ್ತೆ ಮಾಡಿದ್ದಾರೆ. ಲಾರಿಯನ್ನು ಅಡ್ಡ ಹಾಕಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಅದರೊಂದಿಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಸರಗೋಡು ಉಪ್ಪಳ ನಿವಾಸಿಗಳಾದ ಮೊಹಮ್ಮದ್ ಫಾರೂಕ್(24) ಹಾಗೂ ಮೊಯ್ದಿನ್ ನವಾಜ್(34), ಕೊಡಗು ಜಿಲ್ಲೆ ಕುಶಾಲನಗರ ನಿವಾಸಿ ಸೈಯದ್ ಮಹಮ್ಮದ್(31), ದ.ಕ ಜಿಲ್ಲೆಯ ಮುಡಿಪು ನಿವಾಸಿ ಮೊಹಮ್ಮದ್ ಅನ್ಸಾರ್(23) ಬಂಧಿತರು. ಇವರಿಂದ 2 ಲಾಂಗ್, 2 ಚಾಕು, 4 ಮೊಬೈಲ್ ಹಾಗೂ ವೈಫೈ ಸೆಟ್ ವಶ ಪಡಿಸಿಕೊಳ್ಳಲಾಗಿದೆ. ಸಾಗಾಟಕ್ಕೆ ಬಳಸಿದ ಲಾರಿ ಹಾಗೂ ಅದಕ್ಕೆ ನಿರ್ದೇಶನ ನೀಡಲು ಬಳಸುತ್ತಿದ್ದ ಸ್ಕೋಡಾ ಕಾರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ವಶಪಡಿಸಲಾದ ಗಾಂಜಾದ ಮೌಲ್ಯ 50 ಲಕ್ಷದಿಂದ 1 ಕೋಟಿ ರೂ. ಅಂದಾಜಿಸಲಾಗಿದೆ ಎಂದರು.

ವ್ಯವಸ್ಥಿತ ಜಾಲ: ಆರೋಪಿಗಳಲ್ಲಿ ಫಾರೂಕ್, ಅನ್ಸಾರ್, ನವಾಜ್ ವಿರುದ್ಧ ಈಗಾಗಲೇ ಗಾಂಜಾ ಸಾಗಾಟ, ಮಾರಾಟದ ಕೇಸುಗಳಿವೆ. 2012ರಿಂದಲೇ ಅನೇಕರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಇದೊಂದು ವ್ಯವಸ್ಥಿತ ಜಾಲ, ಇನ್ನಷ್ಟು ಮಂದಿ ಇದರಲ್ಲಿದ್ದಾರೆ. ಅವರ ಮಾಹಿತಿ ಲಭ್ಯವಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

ಮಂಗಳೂರು, ಕೊಡಗು, ಹಾಸನ, ಕಾಸರಗೋಡು ವ್ಯಾಪ್ತಿಯಲ್ಲಿ ಮಾರಾಟ ಮಾಡುವುದಕ್ಕಾಗಿ ಗಾಂಜಾ ತರಲಾಗುತ್ತಿತ್ತು. ಕಾಸರಗೋಡನ್ನು ತಮ್ಮ ಚಟುವಟಿಕೆಯ ಕೇಂದ್ರ ಸ್ಥಾನವಾಗಿಸಿದ್ದರು. ಹೈವೇಯಲ್ಲಿ ಕಂಟೈನರ್ ಲಾರಿಗಳನ್ನು ಹೆಚ್ಚು ತಪಾಸಣೆ ಮಾಡುವುದಿಲ್ಲ ಎಂಬ ಕಾರಣಕ್ಕಾಗಿ ಮೀನು ಸಾಗಾಟದ ಆಲ್ ಇಂಡಿಯಾ ಪರ್ಮಿಟ್ ಲಾರಿಯನ್ನು ಬಳಸಿಕೊಂಡಿದ್ದರು. ಹಾಸನದಿಂದ ಸ್ಕೋಡಾ ಕಾರನ್ನು ಆರೋಪಿಗಳು ಎಸ್ಕಾರ್ಟ್ ಆಗಿ ಬಳಸಿಕೊಂಡಿದ್ದರು. ಆರ್ಥಿಕ ಮತ್ತು ಮಾದಕ ದ್ರವ್ಯ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಮೂಡುಬಿದಿರೆ ದರೋಡೆ ಕೇಸಲ್ಲಿ ಸುಳಿವು: ಕೆಲ ತಿಂಗಳ ಹಿಂದೆ ಮೂಡುಬಿದಿರೆಯ ದರೋಡೆ ಪ್ರಕರಣದಲ್ಲಿ ಅನೇಕರು ಬಂಧಿತರಾಗಿದ್ದರು. ಅದರ ತನಿಖೆ ವೇಳೆ ಪೊಲೀಸರಿಗೆ ಕಾಸರಗೋಡಿನ ಅನೇಕ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಲ್ಲದೆ ಆಂಧ್ರಪ್ರದೇಶದಿಂದ ಮಂಗಳೂರು, ಕಾಸರಗೋಡಿಗೆ ಗಾಂಜಾ ಬರುತ್ತಿರುವ ಬಗ್ಗೆಯೂ ಸುಳಿವು ಸಿಕ್ಕಿತ್ತು. ಈ ಬಗ್ಗೆ ಮೂಡುಬಿದಿರೆ ಎಸ್‌ಐ ಸುದೀಪ್ ತನಿಖೆ ನಡೆಸುತ್ತಿದ್ದರು. ಅದರಂತೆ ಹಾಸನ, ಸಕಲೇಶಪುರ, ಉಪ್ಪಿನಂಗಡಿ ಮುಂತಾದೆಡೆ ಪೊಲೀಸರು ಪಹರೆ ನಡೆಸಿದ್ದರು. ಪೊಲೀಸರನ್ನು ಕಂಡ ಆರೋಪಿಗಳು ಒಂದಷ್ಟು ಪ್ರಮಾಣದ ಗಾಂಜಾ ಕಟ್ಟುಗಳನ್ನು ಜತೆಗಿದ್ದ ಕೆಂಪು ಸ್ಕೋಡಾ ಕಾರಿಗೆ ವರ್ಗಾಯಿಸಿ ತಪ್ಪಿಸಲು ಯತ್ನಿಸಿದ್ದರು. ಕೊನೆಗೆ ದಕ್ಷಿಣ ಎಸಿಪಿ ರಂಜಿತ್ ಮತ್ತು ತಂಡ ಉಳ್ಳಾಲ ಪೊಲೀಸರ ಸಹಕಾರದಲ್ಲಿ ತಲಪಾಡಿ ಬಳಿ ಕಾರು, ಲಾರಿಯನ್ನು ನಿಲ್ಲಿಸಿ ಆರೋಪಿಗಳನ್ನು ವಶಕ್ಕೆ ಪಡೆದರು ಎಂದು ಆಯುಕ್ತರು ತಿಳಿಸಿದರು. ಇಡೀ ಪ್ರಕರಣ ಬಯಲಾಗಲು ಮೂಡುಬಿದಿರೆ ಎಸ್‌ಐ ಸುದೀಪ್ ಪಡೆದ ಮಾಹಿತಿ ಕಾರಣವಾಗಿದೆ. ಹಾಗಾಗಿ ಅವರ ತಂಡಕ್ಕೆ 25 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದರು.

ನಕ್ಸಲರಿಗೆ ಪಾಲು: ನಕ್ಸಲ್ ತಾಣವಾದ ತೂಣಿಯಿಂದ ಗಾಂಜಾ ತಂದಿದ್ದು, ಈ ವಹಿವಾಟಿನ ಒಂದಷ್ಟು ಮೊತ್ತ ನಕ್ಸಲರಿಗೆ ಹೋಗುತ್ತದೆ ಎಂಬ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಇದೆ. ಆ ದಿಶೆಯಿಂದಲೂ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.