ಜಿಲ್ಲೆ

14 ಲಕ್ಷ ರೂ.ಮೌಲ್ಯದ ಗಾಂಜಾ ವಶ

Udupi

ಉಡುಪಿ: ಉತ್ತರಪ್ರದೇಶ ನೋಂದಾಯಿತ ಕಂಟೈನರ್ ಲಾರಿಯಲ್ಲಿ ಬರೋಬ್ಬರಿ 49 ಕೆ.ಜಿ.ಗೂ ಅಧಿಕ ಪ್ರಮಾಣದ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗಿನ ಮಾದಕದ್ರವ್ಯ ಪ್ರಕರಣಗಳಲ್ಲಿ ಅತ್ಯಧಿಕ ಪ್ರಮಾಣದ ಗಾಂಜಾ ಪತ್ತೆ ಹಚ್ಚಿದ ಪ್ರಕರಣವಾಗಿದೆ.

ತಮಿಳುನಾಡಿನ ತಿರುವನ್ವೇಲಿ ನಿವಾಸಿ ಕರುತಪಾಂಡಿ(40) ಮತ್ತು ಮೂಲತಃ ಪಶ್ಚಿಮ ಬಂಗಾಳದ ನ್ಯೂ ಕುಚ್‌ಬಿಹಾರ್ ನಿವಾಸಿ, ಉದ್ಯಾವರದಲ್ಲಿ ವಾಸವಾಗಿರುವ ವಾನುಹಲ್ದಾರ್(38) ಎಂಬಾತನನ್ನು ಬಂಧಿಸಲಾಗಿದೆ. ಡಿಸಿಐಬಿ ಪೊಲೀಸ್ ಘಟಕದ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್ ಮತ್ತವರ ತಂಡ ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಬಳಿ ಕೆವಿಕೆ ಕ್ರಾಸ್ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಉಡುಪಿಯಿಂದ ಬ್ರಹ್ಮಾವರ ಕಡೆಗೆ ತೆರಳುತ್ತಿದ್ದ ಯುಪಿ 21 ಸಿಎನ್ 7542 ನೋಂದಣಿ ಸಂಖ್ಯೆಯಲ್ಲಿ ಬಿದಿರಿನ ಕೋಲುಗಳಲ್ಲಿ ಗಾಂಜಾ ಪ್ಯಾಕೆಟ್‌ಗಳು ಪತ್ತೆಯಾಗಿದೆ. ಇದರ ಮೊತ್ತ 14.75 ಲಕ್ಷ ರೂ. ಲಾರಿ ಹಾಗೂ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.