ಉಡುಪಿ: ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳ ದಿನದಿಂದ ಸಂಖ್ಯೆ ಹೆಚ್ಚಳವಾಗುತ್ತಿದೆ. ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಗಾಂಜಾ ಅಮಲು ಯುವಜನರನ್ನು ಆವರಿಸುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಅಂಕಿ ಅಂಶ ಪ್ರಕಾರ ಕಳೆದ ಎರಡುವರೆ ತಿಂಗಳಲ್ಲಿ 40ಕ್ಕೂ ಅಧಿಕ ಪ್ರಕರಣ, 15 ದಿನಗಳಲ್ಲಿ 16ಕ್ಕೂ ಹೆಚ್ಚು ಗಾಂಜಾ ಸೇವನೆ ಪ್ರಕರಣ ದಾಖಲಾಗಿದೆ.
ಗಾಂಜಾ ಪೂರೈಕೆ ಮೂಲ ಪತ್ತೆಯಾಗದಿದ್ದರೂ ಸ್ಥಳೀಯವಾಗಿ ಮಾರಾಟ ಮತ್ತು ಸೇವನೆ ಸಂಬಂಧಿಸಿ ಪೊಲೀಸರು ವ್ಯಸನಿಗಳ ಮೈ ಚಳಿ ಬಿಡಿಸುತ್ತಿದ್ದಾರೆ. ಉಡುಪಿ, ಮಣಿಪಾಲ ಪರಿಸರದಲ್ಲಿ ಗಾಂಜಾ ಸೇವಿಸುವವರ ಮೇಲೆ ದಿನಕ್ಕೊಂದು ಪ್ರಕರಣ ದಾಖಲಾಗುತ್ತಿದೆ. ನಗರದ ಉಡುಪಿ, ಮಣಿಪಾಲ, ಸೆನ್, ಮಲ್ಪೆ ಪೊಲೀಸ್ ಠಾಣೆಯಲ್ಲಿ 40ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಆದರೆ ಗಾಂಜಾ ಅಮಲು ಮಾತ್ರ ನಿಲ್ಲುತ್ತಿಲ್ಲ.
ದಿಕ್ಕು ತಪ್ಪಿಸುತ್ತಿರುವ ಆರೋಪಿಗಳು
ಪ್ರತಿನಿತ್ಯ ಕೇಸು ದಾಖಲಾಗುತ್ತಲೇ ಇದೆ ಆದರೆ ಪೊಲೀಸರಿಗೆ ಮಾತ್ರ ಈ ಗಾಂಜಾ ಮಾಫಿಯ ಜಾಲ ಬೇಧಿಸಲು ಹರಸಾಹಸ ಪಡುತಿದ್ದಾರೆ. ಮಣಿಪಾಲ ಟೈಗಲ್ ಸರ್ಕಲ್ ಬಳಿ ಜ.24ರಂದು ಪಾನ್‌ಶಾಪ್‌ಗಳಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿ 1.660 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದರು. ಬನ್ನಂಜೆ ಗರಡಿ ರಸ್ತೆಯಲ್ಲಿ ಮಾ.10 ರಂದು ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಆರೋಪಿಯನ್ನು ಬಂಧಿಸಿ 25 ಸಾವಿರ ಮೌಲ್ಯದ 1 ಕೆಜಿ 150 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಹಲವರನ್ನು ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಯಶಸ್ವಿಯಾದರೂ ಮೂಲ ಪತ್ತೆ ಹಚ್ಚಲೂ ಸಾಧ್ಯವಾಗುತ್ತಿಲ್ಲ. ಉಡುಪಿ, ಮಣಿಪಾಲ ಕೇಂದ್ರವಾಗಿ ಹೊರ ರಾಜ್ಯದ ಬೇರೆಬೇರೆ ಕಡೆಗಳಿಂದ ಗಾಂಜಾ ಪೂರೈಕೆಯಾಗುತ್ತಿದ್ದು, ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಒಂದೊಂದು ಊರಿನ ಹೆಸರು ಹೇಳುತ್ತಾರೆ ಎನ್ನುತ್ತಾರೆ ಪೊಲೀಸರು.
ಪಾಲಕರು ಹೈರಾಣ: ಗಾಂಜಾ ಜಾಲ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡುತ್ತಿದೆ. ಸ್ಥಳೀಯರು, ಹೊರ ರಾಜ್ಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಾಂಜಾ ಸೇವನೆಯಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಮಕ್ಕಳು ಗುಣಮಟ್ಟದ ವಿದ್ಯಾಭ್ಯಾಸಕ್ಕೆಂದು ಮಣಿಪಾಲ, ಉಡುಪಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುತ್ತಾರೆ. ಆದರೆ ವಿದ್ಯಾರ್ಥಿಗಳು ತಮಗೆ ಅರಿವಿಲ್ಲದೆ ಗಾಂಜಾ ವ್ಯಾಮೋಹಕ್ಕೆ ಬಲಿಯಾಗುತ್ತಿರುವುದು ಪಾಲಕರನ್ನು ಚಿಂತೆಗೀಡು ಮಾಡಿದೆ. ಒಂದು ಬಾರಿ ಎಚ್ಚರಿಕೆ ಕೊಟ್ಟು ಬುದ್ಧಿವಾದ ಹೇಳಿದರೆ ಕೇಳದ ವಿದ್ಯಾರ್ಥಿಗಳು ಮತ್ತದೆ ಚಟಕ್ಕೆ ಬಲಿಯಾಗುತಿದ್ದಾರೆ. ಇತ್ತ ತಮ್ಮ ಮಕ್ಕಳು ಸುಧಾರಣೆ ಕಾಣುತ್ತಾರೆ ಎಂದು ಪೊಲೀಸ್ ಠಾಣೆ, ಕೋರ್ಟು, ಶಿಕ್ಷಣ ಸಂಸ್ಥೆ, ಆಸ್ಪತ್ರೆ ಕೌನ್ಸೆಲಿಂಗ್ ಎಂದು ಪಾಲಕರು ಹೈರಾಣಾಗಿದ್ದಾರೆ.
ಯೂರಿನ್ ಟೆಸ್ಟ್‌ನಲ್ಲಿ ದೃಢ: ಗಾಂಜಾ ಸೇವನೆ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಬಳಿಕ ಆತನನ್ನು ವೈದ್ಯಾಧಿಕಾರಿ ಮುಂದೆ ಹಾಜರುಪಡಿಸುತ್ತಾರೆ. ಆತನ ಯೂರಿನ್ ಮಾದರಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ಫಾರೆನ್ಸಿಕ್ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಗಾಂಜಾ ಸೇವನೆ ವರದಿ ದೃಢಪಟ್ಟ ಬಳಿಕ ಪ್ರಕರಣ ದಾಖಲಿಸಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಗೆ, ಪೋಷಕರಿಗೆ ಮಾಹಿತಿ ನೀಡುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಜಾದಂತ ಮಾದಕ ದ್ರವ್ಯ ಸೇವನೆ ವಿರುದ್ದ ಶಾಲೆ, ಕಾಲೇಜುಗಳಲ್ಲಿ ಪೊಲೀಸ್ ಇಲಾಖೆ ನಿರಂತರ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಗಾಂಜಾ ಸೇವನೆ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಗಾಂಜಾ ಪೂರೈಕೆ ಮೂಲ ಪತ್ತೆಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತಿದ್ದು, ಇತ್ತೀಚೆಗೆ ರಿಕ್ಷಾದಲ್ಲಿ ಮಾರಾಟಕ್ಕೆ ಯತ್ನಿಸುತಿದ್ದ ವ್ಯಕ್ತಿಯನ್ನು ಬಂಧಿಸಿದ್ದೇವೆ. -ಕುಮಾರಚಂದ್ರ,ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆ.