ಶಿವಮೊಗ್ಗ: ಗಾಂಜಾ ಮತ್ತಿನಲ್ಲಿ ಕಿಡಿಗೇಡಿ ಯುವಕರ ಗುಂಪೊಂದು ಕಂಡಕಂಡವರ ಮೇಲೆ ಹಲ್ಲೆ ನಡೆಸಿದ್ದು, ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಭದ್ರಾವತಿಯ ಹೊಸ ಸಿದ್ಧಾಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಗಾಂಜಾ ಸೇವಿಸಿದ್ದ ಎಂಟು ಜನ ಯುವಕರ ಗುಂಪು ಕಂಡಕಂಡವರ ಮೇಲೆ ಹಲ್ಲೆ ನಡೆಸಿದ್ದು, ಹಳೇ ನಂಜಾಪುರದ ವಿನೋದ್ ಮತ್ತು ರಾಜೇಶ್ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಗಲಾಟೆ ಬಿಡಿಸಲು ಹೋದ ನಗರಸಭೆ ಸದಸ್ಯನ ಮಾವನ ಮೇಲೆ ಕೂಡ ಹಲ್ಲೆ ನಡೆದಿದೆ. ಗಾಯಾಳುಗಳನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿಡಿಗೇಡಿಗಳ ಈ ಕೃತ್ಯವನ್ನು ಖಂಡಿಸಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಹಲ್ಲೆಕೋರರನ್ನು ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ನ್ಯೂಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತಪ್ಪಿತಸ್ಥರನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಜನರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.