ಜಿಲ್ಲೆ

ಕೋಳಘಟ್ಟದಲ್ಲಿ ಕಲ್ಲುಗಣಿಗಾರಿಕೆಗೆ ಅಡ್ಡಿ ; ಸ್ಫೋಟದ ತೀವ್ರತೆ ಮಾಪನ ಮಾಡಲೂ ಬಿಡದ ಗ್ರಾಮಸ್ಥರು ; ಪರಿಸರ, ಜನರಿಗೆ ಮಾರಕ

Tumakuru

ತುರುವೇಕೆರೆ: ಪರಿಸರಕ್ಕೆ ಮಾರಕವಾದ ಕಲ್ಲುಗಣಿಗಾರಿಕೆ ನಡೆಸಲು ಅವಕಾಶ ನೀಡಲಾರೆವು ಎಂದು ಕೋಳಘಟ್ಟ ಸುತ್ತಮುತ್ತಲಿನ ಗ್ರಾಮಸ್ಥರು ಬಂಡೆ ಕೊರೆಯಲು ತಡೆಯೊಡ್ಡಿದರು.

ಗ್ರಾಮದ ಸರ್ವೇ ನಂ.55ರ ಗೋಮಾಳದಲ್ಲಿರುವ ಬಂಡೆಯಲ್ಲಿ ಕಲ್ಲುಗಣಿಗಾರಿಕೆ ಆರಂಭಗೊಂಡಿತ್ತು. ಕೋಳಘಟ್ಟ, ಅಜ್ಜೇನಹಳ್ಳಿ, ನೀರಗುಂದ, ನೆಮ್ಮದಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಕಲ್ಲು ಗಣಿಗಾರಿಕೆ ವಿರೋಧಿಸಿದ್ದರಿಂದ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಸ್ಫೋಟದ ತೀವ್ರತೆಯನ್ನು ಮಾಪನ ಮಾಡುವ ಸಲುವಾಗಿ ಪರಿಣಿತರ ತಂಡ ಬುಧವಾರ ಕೋಳಘಟ್ಟಕ್ಕೆ ಆಗಮಿಸಿತ್ತು. ಇದರಿಂದ ಆತಂಕಗೊಂಡ ಗ್ರಾಮಸ್ಥರು ಮತ್ತೆ ಕಲ್ಲುಗಣಿಗಾರಿಕೆ ಆರಂಭಗೊಳ್ಳಬಹುದೆಂಬ ಆತಂಕದಿಂದ ಪರೀಕ್ಷೆ ನಡೆಸಲು ಅವಕಾಶ ನೀಡುವುದಿಲ್ಲವೆಂದು ಪ್ರತಿರೋಧ ವ್ಯಕ್ತಪಡಿಸಿದರು. ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ತಹಸೀಲ್ದಾರ್ ನಯೀಮುನ್ನಿಸಾ ಮನವರಿಕೆ ಮಾಡಲು ಮುಂದಾದರಾದರೂ ಗ್ರಾಮಸ್ಥರು ಮಾತು ಕೇಳಲಿಲ್ಲ.

ಸಿಪಿಐ ನವೀನ್ ಹಾಗೂ ದಂಡಿನಶಿವರ ಪಿಎಸ್‌ಐ ಶಿವಲಿಂಗಪ್ಪ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ಅವಕಾಶ ನೀಡಲ್ಲ : ಕೋಳಘಟ್ಟ ಗೋಮಾಳದಲ್ಲಿರುವ ಬಂಡೆಯಲ್ಲಿ ಕಲ್ಲುಗಣಿಗಾರಿಕೆ ನಡೆಸುವ ಉದ್ದೇಶದಿಂದ ಸ್ಫೋಟಕಗಳನ್ನು ಸಿಡಿಸಲಾಗುತ್ತದೆ. ಸ್ಫೋಟಕದ ತೀವ್ರತೆಗೆ ಅಂತರ್ಜಲದ ಹಾದಿ ತಪ್ಪುತ್ತಿದೆ, ಮಾತ್ರವಲ್ಲದೆ ಪರಿಸರಕ್ಕೆ ಮಾರಕವಾಗುತ್ತದೆ. ಕೃಷಿ ಜಮೀನುಗಳಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಟ್ಟಡಗಳು, ದೇಗುಲಗಳ ಗೋಡೆಗಳು ಬಿರುಕು ಬಿಟ್ಟಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ. ಜನ, ಜಾನುವಾರುಗಳ ಹಾಗೂ ಪರಿಸರಕ್ಕೆ ಮಾರಕವಾದ ಕಲ್ಲುಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಕೋಳಘಟ್ಟ ನಾಗರಾಜ್ ಹೇಳಿದರು.

ಪಟ್ಟು ಹಿಡಿದ ಗ್ರಾಮಸ್ಥರು : ಕಲ್ಲುಗಣಿಗಾರಿಕೆ ಕೋಳಘಟ್ಟ ಅಸುಪಾಸಿನ ಜನ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಸ್ಥಳೀಯರ ಹಿತ ಕಡೆಗಣಿಸಿ ಕಲ್ಲುಗಣಿಗಾರಿಕೆ ನಡೆಸುವುದು ಸೂಕ್ತವಲ್ಲ. ಈ ಬಗ್ಗೆ ಶಾಸಕ ಮಸಾಲಾ ಜಯರಾಂ ಅವರು ಅಧಿವೇಶನ ಮುಗಿಸಿ ಬಂದ ನಂತರ ಅವರನ್ನು ಕರೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಯಾವುದೇ ಪ್ರಕ್ರಿಯೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಕೋಳಘಟ್ಟ ಶಿವಾನಂದ್, ಗ್ರಾಪಂ ಸದಸ್ಯ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ರಾಜೀವ್, ಮಂಜುನಾಥ್, ಮಲ್ಲಿಕಾರ್ಜುನ್, ರಂಗಸ್ವಾಮಿ, ಶಂಕರಪ್ಪ, ರಾಜಶೇಖರ್, ದರ್ಶನ್, ಕೆ.ಎಸ್.ನಾಗರಾಜ್, ಸಾಸಲು ಶಿವಣ್ಣ, ಕೋಳಗಟ್ಟ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.