ಗಂಗಾವತಿ: ಸ್ಮಾರಕಗಳ ರಕ್ಷಣೆ ಮತ್ತು ಪಾವಿತ್ರ್ಯತೆಗೆ ಗಮನಹರಿಸಬೇಕಿದ್ದು, ಜನರಲ್ಲಿ ಜಾಗೃತಿ ಮೂಡಿಸುವಂತೆ ಡಿಸಿ ನಲಿನ್ ಅತುಲ್ ಹೇಳಿದರು.
ತಾಲೂಕಿನ ಆನೆಗೊಂದಿಯ ಶ್ರೀಕೃಷ್ಣ ದೇವರಾಯ ಸಮಾಧಿ ಶಿಲಾ ಮಂಟಪಕ್ಕೆ ಗುರುವಾರ ಭೇಟಿ ಮಾತನಾಡಿದರು. ಸ್ಮಾರಕಗಳಲ್ಲಿ ಮಾಂಸ ಶುದ್ಧೀಕರಣ ನಡೆಸುವುದು ಸರಿಯಲ್ಲ. ಇಂತಹ ಘಟನೆ ಮರುಕಳಿಸದಂತೆ ಗ್ರಾಪಂ ಎಚ್ಚರಿಕೆವಹಿಸಬೇಕಿದ್ದು, ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರಕರಣ ದಾಖಲಾಗಿದ್ದರಿಂದ ಕಾನೂನಾತ್ಮಕವಾಗಿ ಕ್ರಮವಾಗಲಿದೆ. ಗ್ರಾಪಂ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುತ್ತಿದ್ದು, ಕಾಯ್ದೆ ಅನ್ವಯ ಪರಿಹಾರ ದೊರೆಯಲಿದೆ ಎಂದರು.
ಘಟನೆ ಕುರಿತಂತೆ ಗ್ರಾಪಂ ಆಡಳಿತ ಮಂಡಳಿ ಮತ್ತು ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದುಕೊಂಡರಲ್ಲದೇ, ತಪ್ಪಿಸ್ಥರ ಸ್ಥಿತಿಗತಿ ಕುರಿತು ಚರ್ಚಿಸಿದರು. ನಂತರ ಗ್ರಾಪಂ ಕಚೇರಿಗೆ ತೆರಳಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಮತ್ತು ಸದಸ್ಯರೊಂದಿಗೆ ಚರ್ಚಿಸಿದರು. ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಅಭಿವೃದ್ಧಿ ಕಾರ್ಯ ಮತ್ತು ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ತಾಪಂ ಇಒ ರಾಮರೆಡ್ಡಿ ಪಾಟೀಲ್, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಗ್ರಾಪಂ ಸದಸ್ಯರಾದ ಡಾ.ಕೆ.ವೆಂಕಟೇಶಬಾಬು, ಮಲ್ಲಿಕಾರ್ಜುನಸ್ವಾಮಿ, ಪಿಡಿಒ ರವೀಂದ್ರ ಕುಲ್ಕರ್ಣಿ, ಗ್ರಾಮಾಡಳಿತಾಧಿಕಾರಿ ಮಹಾಲಕ್ಷ್ಮೀನಾಯಕ ಇತರರಿದ್ದರು.
ಹಕ್ಕುಪತ್ರಕ್ಕಾಗಿ ಗ್ರಾಪಂಗೆ ಮುತ್ತಿಗೆ ಇಂದು: ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ಹಕ್ಕುಪತ್ರಕ್ಕಾಗಿ ಏ.25ರಂದು ಗ್ರಾಪಂ ಮುತ್ತಿಗೆ ಹೋರಾಟ ಹಮ್ಮಿಕೊಂಡಿದ್ದಾರೆ. ಆನೆಗೊಂದಿ, ಚಿಕ್ಕರಾಂಪುರ 1, ಚಿಕ್ಕರಾಂಪುರ 2, ಕಡೇಬಾಗಿಲು, ಬಸವನದುರ್ಗದಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ನಿವಾಸಿಗಳಿಗೆ ಹಕ್ಕುಪತ್ರ ದೊರೆತಿಲ್ಲ. 9/11ಬಿ ನೀಡಲು ಸರ್ಕಾರ ಸೂಚಿಸಿದ್ದರೂ ಅಧಿಕಾರಿಗಳು ನೀಡುತ್ತಿಲ್ಲ. ಇತ್ತೀಚಿಗೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್‌ಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಸ್ಪಷ್ಟತೆ ದೊರೆಯದಿದ್ದರಿಂದ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.