ಗಂಗಾವತಿ: ಚುನಾವಣಾ ಪ್ರಚಾರಕ್ಕಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಏ.30ರಂದು ನಗರಕ್ಕೆ ಬರಲಿದ್ದಾರೆ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದ್ದು, ಬಿಜೆಪಿ ಅಲೆ ಜೋರಾಗಿದೆ. ಅಯೋಧ್ಯೆ ನಗರದಿಂದ ಅಂಜನಾದ್ರಿ ಕ್ಷೇತ್ರಕ್ಕೆ ಯೋಗಿ ಆದಿತ್ಯನಾಥ ಬರಲಿದ್ದು, ನಗರದ ಎಪಿಎಂಸಿ ಮೈದಾನದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ.
ರೋಡ್ ಶೋ ನಡೆಸುವ ಚಿಂತನೆಯಿದ್ದು, ಇನ್ನೂ ಪರವಾನಗಿ ದೊರೆತಿಲ್ಲ. ಏ.29ರಂದು ಸಾರಿಗೆ ಸಚಿವ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಕೆಆರ್‌ಪಿಪಿಗೆ ಹೋಗಿರುವ ಕೆಲವರು ಶೀಘ್ರವೇ ಬಿಜೆಪಿಗೆ ಮರಳಲಿದ್ದಾರೆ ಎಂದರು.ಗ್ರಾಮೀಣ ಘಟಕದ ಅಧ್ಯಕ್ಷ ಚನ್ನಪ್ಪ ಮಳಗಿ ಮಾತನಾಡಿದರು.
ಹಾಲುಮತ ಸಮಾಜದ ಶ್ರೀಗಳಾದ ಸಿದ್ದರಾಮಯ್ಯ ಗುರುವಿನ್, ನಗರಸಭೆ ಸದಸ್ಯ ಉಮೇಶ ಸಿಂಗನಾಳ್, ಪರಶುರಾಮ್ ಮಡ್ಡೇರ್, ಮಾಜಿ ಸದಸ್ಯರಾದ ಜೋಗದ ಹನುಮಂತಪ್ಪ ನಾಯಕ, ವೀರಭದ್ರಪ್ಪ ನಾಯಕ, ಎಪಿಎಂಸಿ ಮಾಜಿ ಸದಸ್ಯ ಜೋಗದ ನಾರಾಯಣಪ್ಪ ನಾಯಕ, ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಕೆ.ವೆಂಕಟೇಶ, ಸಂಗಯ್ಯಸ್ವಾಮಿ ಸಂಶಿಮಠ, ಟಿ.ಆರ್.ರಾಯಭಾಗಿ, ಮುಖಂಡರಾದ ರುದ್ರೇಶ ಡ್ಯಾಗಿ, ಚಂದ್ರಪ್ಪ ಉಪ್ಪಾರ್, ಕೆ.ಮಂಜುನಾಥ ಇತರರಿದ್ದರು.