ಗಂಗಾವತಿ: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಮದ್ಯದ ಅಕ್ರಮ ಮಾರಾಟ ನಿಯಂತ್ರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ ಬಣ) ತಾಲೂಕು ಘಟಕದ ಸದಸ್ಯರು ನಗರದ ಅಬಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಸಮಿತಿ ಜಿಲ್ಲಾಧ್ಯಕ್ಷ ಸಿ.ಕೆ.ಮರಿಸ್ವಾಮಿ ಬರಗೂರು ಮಾತನಾಡಿ, ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕಿನಲ್ಲಿ ಮದ್ಯದ ಅಕ್ರಮ ಮಾರಾಟ ಹೆಚ್ಚುತ್ತಿದ್ದು, ಕಾರ್ಮಿಕ ಮತ್ತು ಬಡ ವರ್ಗದ ಜನ ವಾಸಿಸುವ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕುಡಿತದ ಹಾವಳಿ ಹೆಚ್ಚಾಗುತ್ತಿದೆ.
ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಕ್ರಮ ಕೈಗೊಳ್ಳಬೇಕಾದ ಅಬಕಾರಿ ಅಧಿಕಾರಿಗಳು ಮಾರಾಟಗಾರರೊಂದಿಗೆ ಶಾಮೀಲಾಗಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಅಕ್ರಮ ಮಾರಾಟ ನಿಲ್ಲಿಸುವವರೆಗೂ ಹೋರಾಟ ನಿರಂತರವಾಗಲಿದೆ ಎಂದರು.
ಪದಾಧಿಕಾರಿಗಳಾದ ಹುಲಿಗೇಶ ಭೋವಿ, ಅತಾ ಸಂಪಂಗಿ, ಸುಹೇಲ್, ಹನುಮೇಶ ಕನಕಗಿರಿ, ಯಲ್ಲಪ್ಪ, ನಾಗರಾಜ ಗಾಂಧಿನಗರ, ವೆಂಕಟೇಶ ಇತರರಿದ್ದರು.