ಗಂಗಾವತಿ: ತಾಲೂಕಿನ ಉಡುಮಕಲ್‌ನಲ್ಲಿ ಸರ್ಕಾರಿ ಕೃಷಿ ಕಾಲೇಜಿನ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಹಿನ್ನೆಲೆಯಲ್ಲಿ ಕೃಷಿ ವಿದ್ಯಾರ್ಥಿಗಳಿಂದ ಬೀಜೋಪಚಾರ ಮತ್ತು ಮೋಹಕ ಬಲೆಗಳ ಕುರಿತು ಪ್ರಾತ್ಯಕ್ಷಿಕೆ ಕಾರ್ಯಾಗಾರ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ರಾಯಚೂರು ಕೃಷಿ ವಿವಿ ವ್ಯಾಪ್ತಿಯ ಸರ್ಕಾರಿ ಕೃಷಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು, ರೈತರ ಕೃಷಿ ಭೂಮಿಗೆ ತೆರಳಿ ಬೆಳೆಗಳ ಆರೈಕೆ, ಬೀಜೋಪಾಚಾರ, ಮೋಹಕ ಬಲೆಗಳ ಅಳವಡಿಕೆ ಮತ್ತು ಉಪಯೋಗ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಕೀಟ ತಜ್ಞ ಹಾಗೂ ಪ್ರಾಧ್ಯಾಪಕ ಡಾ.ಬದರಿಪ್ರಸಾದ ಮಾತನಾಡಿ, ಬೀಜೋಪಾಚಾರದಿಂದ ಕೀಟ ಬಾಧೆ ನಿಯಂತ್ರಿಸಬಹುದಾಗಿದ್ದು, ರೋಗ ಬಾರದಂತೆ ಕ್ರಮಕೈಗೊಳ್ಳಬಹುದಾಗಿದೆ. ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮೋಹಕ ಬಲೆ ಆಳವಡಿಸಿದ್ದು, ಕೀಟ ಬಾಧೆ ನಿಯಂತ್ರಣಕ್ಕೆ ಪೂರಕವಾದ ಕೀಟ ನಾಶಕಗಳ ಬಗ್ಗೆ ಮಾಹಿತಿ ನೀಡಲಾಯಿತು.
ತಜ್ಞ ಹಾಗೂ ಪ್ರಾಧ್ಯಾಪಕ ಡಾ. ಗಂಗಾಧರ, ಸಹಾಯಕ ಪ್ರಾಧ್ಯಾಪಕ ಡಾ.ಎಂ.ಟಿ.ಮಹಾಂತೇಶ, ಪ್ರಗತಿಪರ ರೈತರಾದ ಶಿವಪ್ಪ ಸಂಗನಾಳ, ಬಸವರಾಜ ಸಂಡೂರು ಹಾಗೂ ಕೃಷಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.