ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅಭಿಯಾನದ ಸಂಯೋಜಕ ಮತ್ತು ಪರಿಸರ ತಜ್ಞ ಬಸವರಾಜ ಪಾಟೀಲ್ ವೀರಾಪುರ ಭಾನುವಾರ ಮಾತನಾಡಿದರು. ಆರ್ಥಿಕ ತಜ್ಞ ಬಿ.ಎಂ.ಕುಮಾರಸ್ವಾಮಿ, ಅಭಿಯಾನದ ಪ್ರಮುಖರಾದ ನಾಗರಾಜ್ ಕುಲ್ಕರ್ಣಿ, ಸಂತೋಷ ಕೆಲೋಜಿ, ಬಾಲಕಷ್ಣ, ಎಂ.ಶಂಕರ ಇತರರಿದ್ದರು.  
ಜಿಲ್ಲೆ

ನಿರ್ಮಲ ತುಂಗಭದ್ರಾ ಅಭಿಯಾನ ನ.4ರಿಂದ

ಗಂಗಾವತಿ: ತುಂಗಭದ್ರಾ ನದಿ ಶುದ್ಧತೆ ಜನಜಾಗೃತಿಗಾಗಿ ನಿರ್ಮಲ ತುಂಗಭದ್ರಾ ಅಭಿಯಾನ ಹಮ್ಮಿಕೊಂಡಿದ್ದು, ನ.4ರಿಂದ ಆರಂಭವಾಗಲಿದೆ ಎಂದು ಅಭಿಯಾನದ ಸಂಯೋಜಕ ಮತ್ತು ಪರಿಸರ ತಜ್ಞ ಬಸವರಾಜ ಪಾಟೀಲ್ ವೀರಾಪುರ ಹೇಳಿದರು.

ನಗರದ ಎಸ್‌ಎಸ್‌ಎಲ್‌ಆರ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶ್ರೀ ಕ್ಷೇತ್ರ ಶಂಗೇರಿ ಬಳಿ ಗಂಗಡಿಕಲ್ಲು ಪ್ರದೇಶದಲ್ಲಿ ಜನಿಸುವ ತುಂಗಾ ಮತ್ತು ಭದ್ರಾ ನದಿಗಳು ಕೂಡಲಿಯಲ್ಲಿ ಸಮಾಗಮದೊಂದಿಗೆ ತುಂಗಭದ್ರಾ ನದಿಯಾಗಿ 400 ಕಿ.ಮೀವರೆಗೂ ಹರಿಯುತ್ತಿದೆ. ಪವಿತ್ರ ನದಿಗೆ ಗ್ರಾಮ, ಪಟ್ಟಣ ಮತ್ತು ನಗರ ಪ್ರದೇಶದ ತ್ಯಾಜ್ಯಗಳು, ಕಾರ್ಖಾನೆಯ ಮಲಿನ ವಸ್ತುಗಳು ಸೇರುತ್ತಿದ್ದು, ನೀರು ಕಲುಷಿತಗೊಳ್ಳುತ್ತಿದೆ. ಪವಿತ್ರ ಮತ್ತು ಔಷಧ ಗುಣ ಹೊಂದಿರುವ ನದಿ ನೀರು ತುಂಗಾ ಪಾನ ಎಂಬ ಖ್ಯಾತಿ ಪಡೆದಿದೆ.

ನದಿಯ ಶುದ್ಧತೆಗೆ ನ.4 ರಿಂದ ನಿರ್ಮಲ ತುಂಗಭದ್ರಾ ಅಭಿಯಾನ ಆರಂಭಿಸಲಾಗುತ್ತಿದ್ದು, ನದಿ ಪಾತ್ರದ ಗ್ರಾಮಗಳ ಮೂಲಕ ಪಾದಯಾತ್ರೆಯೊಂದಿಗೆ ಕಿಷ್ಕಿಂಧಾ ಪ್ರದೇಶಕ್ಕೆ ತಲುಪಿ ಜಲ ಮತ್ತು ಜನ ಜಾಗೃತಿ ನಡೆಸಲಾಗುವುದು. ಶಂಗೇರಿಯಿಂದ ಕರ್ನೂಲವರೆಗೂ ಅಭಿಯಾನ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮಂತ್ರಾಲಯದವರೆಗೂ ವಿಸ್ತರಿಸುವ ಚಿಂತನೆಯಿದೆ. ಜನವಸತಿ ಪ್ರದೇಶದ ತ್ಯಾಜ್ಯವನ್ನು ಶುದ್ಧಿಕರೀಸಿ ನದಿಗೆ ಬಿಡುವ ಕುರಿತು ಸರ್ಕಾರ ಮತ್ತು ಸ್ಥಳೀಯಾಡಳಿತಕ್ಕೆ ಒತ್ತಾಯಿಸಲಾಗುವುದು ಎಂದರು.

ಅಭಿಯಾನದ ಉದ್ದೇಶ, ಪಾದಯಾತ್ರೆ ಮತ್ತು ನದಿ ಶುದ್ಧೀಕರಣ ಕುರಿತು ಆರ್ಥಿಕ ತಜ್ಞ ಬಿ.ಎಂ.ಕುಮಾರಸ್ವಾಮಿ, ಅಭಿಯಾನದ ಪ್ರಮುಖ ನಾಗರಾಜ್ ಕುಲ್ಕರ್ಣಿ ಮಾತನಾಡಿದರು. ಪ್ರಮುಖರಾದ ಸಂತೋಷ ಕೆಲೋಜಿ, ಬಾಲಕಷ್ಣ, ಎಂ.ಶಂಕರ, ಮಾಧವ, ಮಂಜುನಾಥ ಕಟ್ಟಿಮನಿ ಇತರರಿದ್ದರು.