ಗಂಗಾವತಿ ತಾಲೂಕಿನ ಲಿಂಗದಳಹಳ್ಳಿಯಲ್ಲಿ ಕಿಷ್ಕಿಂದ ಯುವ ಚಾರಣ ಬಳಗ, ಲಿವ್ ವಿಥ್ ಹುಮ್ಯಾನಿಟಿಯಿಂದ ಆಯೋಜಿಸಿದ್ದ ಕೆಸರು ಗದ್ದೆ ಗ್ರಾಮೀಣ ಕ್ರೀಡಾ ಕೂಟದಲ್ಲಿ ಯುವಕರು ಭಾಗವಹಿಸಿದ್ದರು.  
ಜಿಲ್ಲೆ

ಗ್ರಾಮೀಣ ಕ್ರೀಡೆಗಳತ್ತ ಸೆಳೆಯಲು ಯತ್ನ

ಗಂಗಾವತಿ: ಕೆಸರು ಗದ್ದೆಯಲ್ಲಿ ದೇಶಿ ಆಟಗಳನ್ನಾಡಿ ಸಂಭ್ರಮಿಸಿದ ಯುವಪಡೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಪ್ರಸ್ತುತಪಡಿಸುವ ಮೂಲಕ ಭಾನುವಾರ ಸಂಭ್ರಮಿಸಿತು.

ತಾಲೂಕಿನ ಲಿಂಗದಳಹಳ್ಳಿಯಲ್ಲಿ ಕಿಷ್ಕಿಂದ ಯುವ ಚಾರಣ ಬಳಗ, ಲಿವ್ ವಿಥ್ ಹುಮ್ಯಾನಿಟಿಯಿಂದ ಆಯೋಜಿಸಿದ್ದ ಕೆಸರು ಗದ್ದೆ ಗ್ರಾಮೀಣ ಕ್ರೀಡಾ ಕೂಟದಲ್ಲಿ ಯುವಕರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

ಕಬಡ್ಡಿ, ಹಗ್ಗಜಗ್ಗಾಟ, ರನ್ನಿಂಗ್ ರೇಸ್, ಮಡಕೆ ಒಡೆಯುವ ಸ್ಪರ್ಧೆ ಆಯೋಜಿಸಿದ್ದು, ಥ್ರೋಬಾಲ್, ವಾಲಿಬಾಲ್‌ಗೂ ಆದ್ಯತೆ ನೀಡಲಾಗಿತ್ತು. ಅಧುನಿಕ ಯುಗದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಯುವ ಪೀಳಿಗೆ ಮರೆಯುತ್ತಿರುವ ಸಂದರ್ಭದಲ್ಲಿ ದೇಸಿ ಕ್ರೀಡೆ ಆಯೋಜಿಸಿದ್ದು, ಎಲ್ಲರ ಮೆಚ್ಚುಗೆ ವ್ಯಕ್ತವಾಯಿತು.

ಯುವ ಸಮುದಾಯ ಮೊಬೈಲ್ ಗೀಳಿಗೆ ಅಂಟಿಕೊಂಡು ಯಾವುದೇ ಆಟೋಟಕ್ಕೆ ಮುಂದಾಗುತ್ತಿಲ್ಲ. ಹಳ್ಳಿಗಳಲ್ಲೂ ಕೂಡ ಗ್ರಾಮೀಣ ಕ್ರೀಡೆಗಳ ಆಸಕ್ತಿ ಕುಂದುತ್ತಿದೆ. ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವ ಮತ್ತು ಯುವಕರು, ಚಿಣ್ಣರನ್ನು ಗ್ರಾಮೀಣ ಕ್ರೀಡೆಗಳತ್ತ ಉತ್ತೇಜಿಸುವುದಕ್ಕಾಗಿ ಮೊದಲ ಬಾರಿಗೆ ಆಟೋಟಗಳನ್ನು ಆಯೋಜಿಸಲಾಗಿದೆ ಎಂದು ಚಾರಣ ಬಳಗದ ಪ್ರತಿನಿಧಿ ಜಿ.ಆರ್.ಅರ್ಜುನ್ ತಿಳಿಸಿದರು. ಪ್ರತಿ ಭಾನುವಾರ ತಾಲೂಕಿನ ಐತಿಹಾಸಿಕ ಸ್ಥಳಗಳಿಗೆ ಚಾರಣ, ಸ್ವಚ್ಛತಾ ಕಾರ್ಯ ಆಯೋಜಿಸಲಾಗುತ್ತಿತ್ತು.

ಪ್ರಮುಖರಾದ ಮದ್ದಾನಪ್ಪ ಹೊಸಳ್ಳಿ, ಮಧುಸೂದನ್, ಮುತ್ತು, ಪ್ರಕಾಶ ಮುರ್ನಾಳ, ಮಂಜು, ಭದ್ರಿನಾಥ ಜೋಶಿ, ಶ್ರೀಧರ್ ಐಲಿ, ಚನ್ನಬಸವ ಬಳ್ಳೊಳ್ಳಿ, ಅಯ್ಯಣ್ಣ, ನಾಗರಾಜ ಉಪ್ಪಿನ್, ದೇವರಾಜ, ಮಂಜುನಾಥ ಇಂಡಿ, ಪಂಪಾಪತಿ, ಮಂಜುಳಾ ಇತರರಿದ್ದರು.