ಗಂಗಾವತಿ: ವೇಗವಾಗಿ ಬೆಳೆಯುತ್ತಿರುವ ಜಗತ್ತಿನ ಮಕ್ಕಳಿಗೆ ಸಂಸ್ಕಾರದ ಅಗತ್ಯವಿದ್ದು, ಭವಿಷ್ಯದ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಮಠ ಮಾನ್ಯಗಳ ಮೇಲಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ತಾಲೂಕಿನ ಗಡ್ಡಿಯ ಶ್ರೀಕ್ಷೇತ್ರ ಅಜಾತ ಅಪ್ಪಾಜಿ ಸದ್ಧರ್ಮ ಪೀಠದ ಗುರುಕುಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ, ದಾಸೋಹ ಪರಿಕಲ್ಪನೆಯಡಿ ಮಠಗಳು ನಡೆಯುತ್ತಿದ್ದು, ಅನೇಕ ಸಾಧಕರನ್ನು ನೀಡಿದ ಸಾಕ್ಷಿಗಳಿವೆ. ಗುಣಮಟ್ಟದ ಶಿಕ್ಷಣದ ಜತೆಗೆ ಕೌಶಲಗಳನ್ನು ತಿಳಿಸಿಕೊಡಬೇಕಿದ್ದು, ಮಠಗಳ ಅಭಿವೃದ್ಧಿಗೆ ಪಾಲಕರು ಮತ್ತು ಭಕ್ತರ ಸಹಕಾರ ಮುಖ್ಯ ಎಂದರು.
ಸದ್ಧರ್ಮ ಪೀಠದ ಪೀಠಾಧಿಪತಿ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಅಧಿಕಾರ ಪಡೆಯಲು ಶಿಕ್ಷಣ ಪ್ರೇರಕ ಶಕ್ತಿಯಾಗಿದ್ದು, ಜ್ಞಾನ ಜಗತ್ತನ್ನು ಆಳುತ್ತಿದೆ. ಸಂಸ್ಕಾರದೊಂದಿಗೆ ವೈಜ್ಞಾನಿಕತೆ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ವಿದ್ಯಾದಾನ ಶ್ರೇಷ್ಠ ಎಂದರು.
ವಿವಿಧ ಕ್ಷೇತ್ರದ ಸಾಧಕರಾದ ಡಾ.ಶರಣಬಸಪ್ಪ ಕೋಲ್ಕಾರ್, ಡಾ.ಎನ್.ಡಿ.ತಿಪ್ಪೇಸ್ವಾಮಿ, ರಾಘವೇಂದ್ರ ಭಯ್ಯಪುರ, ಡಾ.ಬಸವರಾಜ ಗವಿಮಠ ಅವರಿಗೆ ಸದ್ಧರ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗುಳೇದಗುಡ್ಡದ ಸದಾನಂದ ಶಿವಯೋಗಿ ಮಠದ ನಾಗಭೂಷಣ ದೇವರು, ವೀರಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಅರ್ಜುನ ನಾಯಕ, ಕ್ರೈಸ್ತ ಧರ್ಮಗುರುಗಳಾದ ರೆ.ಜಬಾಮಲೈ, ಗ್ರಾಪಂ ಸದಸ್ಯ ಬಸನಗೌಡ ಪೊ.ಪಾಟೀಲ್, ಮುಖಂಡರಾದ ಮಹೋಹರಗೌಡ ಹೇರೂರು, ಡಿ.ಕೆ.ಆಗೋಲಿ, ಆರ್.ದೇವಾನಂದ, ಸಿದ್ದಲಿಂಗಯ್ಯ ಗಡ್ಡಿಮಠ, ಬಸಂತಗೌಡ ಚಿಕ್ಕಮಾದಿನಾಳ, ಬಸವರಾಜಗೌಡ ಪೊ.ಪಾಟೀಲ್, ಶ್ರುತಿ ತಾವರಗೇರಾ, ಸಂಗಯ್ಯಸ್ವಾಮಿ ಸಂಶಿಮಠ ಇತರರಿದ್ದರು.