ಗಂಗಾವತಿ: ಕನ್ನಡ ಶಾಲೆಗಳನ್ನು ಮುಚ್ಚಲು ಜನರ ಅಸಹಕಾರ ಮತ್ತು ಸರ್ಕಾರದ ನೀತಿಗಳೇ ಕಾರಣವಾಗಿದ್ದು, ಸಿಬ್ಬಂದಿ ಮತ್ತು ಗುಣಮಟ್ಟದ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ವಿಲವಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಸಿ.ಎಚ್.ನಾರಿನಾಳ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಾಲಕರ ಸರ್ಕಾರಿ ಪಪೂ ಕಾಲೇಜು ಮೈದಾನದಲ್ಲಿ ಕಸಾಪ ತಾಲೂಕು ಘಟಕ ಆಯೋಜಿಸಿರುವ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ ಮಾತನಾಡಿದರು. ಕಸಾಪದಲ್ಲಿ ಪಟ್ಟಭದ್ರರ ಮತ್ತು ರಾಜಕಾರಣಿಗಳ ಹಸ್ತಕ್ಷೇಪ ಹೆಚ್ಚುತ್ತಿದ್ದು, ಅರ್ಹರಿಗೆ ಸ್ಥಾನಮಾನ ದೊರೆಯುತ್ತಿಲ್ಲ. ಬದಲಿಸುವ ಮನಸ್ಸುಗಳಿಗೆ ಅಧಿಕಾರ ಕೊಡಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಾವಿರಾರು ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಕಸಾಪದಲ್ಲಿರುವ ಸದಸ್ಯರ ಮಕ್ಕಳೇ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿಲ್ಲ. ಇನ್ನೂ ಕನ್ನಡ ಶಾಲೆಗಳ ಉದ್ಧಾರ ಎಲ್ಲಿಂದಾಗಬೇಕು. ಉದ್ಯೋಗ ಸೃಷ್ಟಿಗೆ ಸರ್ಕಾರ ಯೋಜನೆಗಳನ್ನು ರೂಪಿಸಬೇಕಿದ್ದು, ಮಹಿಳಾ ಸಬಲೀಕರಣಕ್ಕಾಗಿ ಉದ್ಯೋಗ ಆಧಾರಿತ ತರಬೇತಿ ಕೇಂದ್ರಗಳನ್ನು ತೆರೆಯಬೇಕಿದೆ. ಭಾವೈಕ್ಯತೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದ್ದು, ರಾಜಕೀಯ ವೈಷಮ್ಯ, ಪ್ರತಿಷ್ಠೆ, ಹಗೆತನ ಬಿಟ್ಟು ಸಮಗ್ರ ಅಭಿವೃದ್ಧಿಗೆ ಕನ್ನಡ ಮನಸ್ಸುಗಳು ಕೈಜೋಡಿಸಬೇಕಿದೆ ಎಂದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಡಾ.ಮುಮ್ತಾಜ್ ಬೇಗಂ ಮಾತನಾಡಿ, ಕೀರ್ತಿ, ಗೌರವದ ಹಿಂದೆ ಸಾಹಿತಿಗಳು ಹೋಗುತ್ತಿರುವುದರಿಂದ ಪರಿಣಾಮಕಾರಿ ಸಾಹಿತ್ಯ ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಕಸಾಪ ವಿಭಿನ್ನ ಚಟುವಟಿಕೆಗಳ ಮೂಲಕ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುತ್ತಿದೆ. ಮಹಿಳೆಯರಿಗಾಗಿ ತಾಂತ್ರಿಕ ಕಾಲೇಜು ಮತ್ತು ವಸತಿ ನಿಲಯಗಳನ್ನು ತೆರೆಯುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದ್ದು, ಪರಿಷತ್ ಒತ್ತಡ ಹಾಕಬೇಕಿದೆ ಎಂದರು. ಸಮ್ಮೇನಾಧ್ಯಕ್ಷ ಸಿ.ಎಚ್.ನಾರಿನಾಳ್‌ಗೆ ಮುಮ್ತಾಜ್ ಬೇಗಂ ಧ್ವಜ ಹಸ್ತಾಂತರಿಸಿದರು. ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ ಮಾತನಾಡಿದರು. ಕಸಾಪ ಸದಸ್ಯರಾದ ಶಿವಾನಂದ ತಿಮ್ಮಾಪುರ, ಮೈಲಾರಪ್ಪ ಬೂದಿಹಾಳ್ ನಿರ್ವಹಿಸಿದರು.