ಗಂಗಾವತಿ: ರಾಜ್ಯ ಮತ್ತು ಕೇಂದ್ರ ಸರ್ಕಾರ ಜನ, ಕಾರ್ಮಿಕ ವಿರೋಧಿ ನೀತಿ ಜಾರಿಗೆ ತಂದಿದ್ದು, ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿದೆ ಎಂದು ರಾಜ್ಯ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ದೂರಿದರು.
ನಗರದ ಸಿಐಟಿಯು ಕಚೇರಿ ಆವರಣದಲ್ಲಿ ಕೋಮುಸೌಹಾರ್ದತೆಗಾಗಿ ಕೆಪಿಆರ್‌ಎಸ್, ಸಿಐಟಿಯು ಎಐಎಡಬ್ಲುೃಯು ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು. ಕಾರ್ಪೋರೇಟ್ ಕಂಪನಿಗಳ ಪರ ಯೋಜನೆ ರೂಪಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ, ಜನಹಿತ ಮರೆತಿದೆ. ಕೃಷಿ ಮತ್ತು ಕಾರ್ಮಿಕ ವಿರೋಧಿ ನೀತಿ ಜಾರಿ ತರುವ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಈ ನಡೆ ಪ್ರಶ್ನಿಸಿದರೆ ದೇಶ ವಿರೋಧಿ ಚಟುವಟಿಕೆ ಎಂದು ಬಿಂಬಿಸಲಾಗುತ್ತಿದೆ. ಸರ್ಕಾರ ನೀತಿ ಖಂಡಿಸಿ, ಕೋಮುಸೌಹಾರ್ದತೆಗೆ ಏ.5ರಂದು ದಿಲ್ಲಿಯಲ್ಲಿ ಬೃಹತ್ ಸಂಘರ್ಷ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ರೈತ ಮತ್ತು ಕಾರ್ಮಿಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದರು.
ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮೀ, ಜಿಲ್ಲಾ ಕಾರ್ಯದರ್ಶಿ ಜಿ.ನಾಗರಾಜ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಆರ್.ಕೆ.ದೇಸಾಯಿ, ಸುಂಕಪ್ಪ ಗದಗ್, ಲಕ್ಷ್ಮೀದೇವಿ, ಖಾಸೀಂ ಸರ್ದಾರ್ ಇತರರಿದ್ದರು.