ಗಂಗಾವತಿ: ಜೀವಜಲ ಮಿತವಾಗಿ ಬಳಸುವುದರ ಜತೆಗೆ ಶುದ್ಧ ನೀರು ಉಪಯೋಗಿಸಲು ಸಾರ್ವನಿಕರು ಗಮನಹರಿಸಬೇಕಿದೆ ಎಂದು ಸಂಪನ್ಮೂಲ ವ್ಯಕ್ತಿ, ಬಾಲಕರ ಪ.ಪೂ.ಕಾಲೇಜಿನ ಉಪನ್ಯಾಸಕಿ ಲಲಿತಾನಾರಾಯಣ ಕಂದ್ಗಲ್ ಹೇಳಿದರು.
ನಗರದ ಸಿದ್ದಿಕೇರಿಯ ಜೀವನ ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ಮಂಗಳವಾರ ಹಮ್ಮಿಕೊಂಡಿದ್ದ ನೀರಿನ ಮಹತ್ವ ಮತ್ತು ಬಳಕೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಸ್ಥೃ ಆರೋಗ್ಯಕ್ಕೆ ಶುದ್ಧ ಕುಡಿವ ನೀರಿನ ಅಗತ್ಯವಿದ್ದು, ವೈದ್ಯರ ಸಲಹೆಯಂತೆ ನೀರಿನ ಪ್ರಮಾಣ ನಿಗದಿಪಡಿಸಿಕೊಳ್ಳಬೇಕು. ನೀರು ಅನಗತ್ಯ ಪೋಲು ಮಾಡುವುದನ್ನು ತಪ್ಪಿಸಬೇಕಿದ್ದು, ಶುದ್ಧತೆಯತ್ತ ಗಮನಹರಿಸುವಂತೆ ಸಲಹೆ ನೀಡಿದರು.
ಟ್ರಸ್ಟ್ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ನೀರಿನ ಮಹತ್ವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದ್ದು, ಮಿತ, ಹಿತವಾಗಿ ಬಳಸಬೇಕು. ಆರ್ಥಿಕಾಭಿವೃದ್ಧಿಯ ಜತೆಗೆ ಜೀವಜಲ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು.
ನೀರು ಉಳಿಸುವ ಕುರಿತು ಸಂಯೋಜಕ ಉಮೇಶ ಮಾಹಿತಿ ನೀಡಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಧಾ, ಸೇವಾ ಪ್ರತಿನಿಧಿ ಪಾರಮ್ಮ ಸೇರಿ ಒಕ್ಕೂಟದ ಸದಸ್ಯರಿದ್ದರು.