ಗಂಗಾವತಿ: ತುಂಗಾಭದ್ರ ಜಲಾಶಯದಿಂದ ನದಿಗೆ ಪ್ರಸಕ್ತ ಸಾಲಿನಲ್ಲಿ ಎರಡನೇ ಬಾರಿ ಹೆಚ್ಚುವರಿ ನೀರು ಹರಿಸಿದ ಪರಿಣಾಮ ನದಿ ತೀರದ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಸ್ಮಾರಕಗಳು ಮುಳುಗಡೆಯಾಗಿವೆ.
ಜಲಾಶಯದಿಂದ ನದಿಗೆ 1.15 ಲಕ್ಷ ಕ್ಯೂಸೆಕ್ ನೀರು ಹರಿಸಿದ ಪರಿಣಾಮ ನದಿ ತೀರದಲ್ಲಿರುವ ವಿರುಪಾಪುರಗಡ್ಡಿ, ಋಷ್ಯಮುಖ ಪರ್ವತ, ನವವೃಂದಾವನಗಡ್ಡಿ, ಹಳೇ ಕರಿಯಮ್ಮನಗಡ್ಡಿ, ವಿಪ್ರ, ಸಿಂಗನಗುಂಡ, ಕಂಪ್ಲಿ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಆನೆಗೊಂದಿ ಬಳಿ ಶ್ರೀಕೃಷ್ಣ ದೇವರಾಯ ಶಿಲಾಮಂಟಪ ಜಲಾವೃತಗೊಂಡಿದೆ.
ಚಿಂತಾಮಣಿ ಖೂಳಮಂಟಪಕ್ಕೆ ನೀರು ನುಗ್ಗಿವೆ. ಗೂಡಿಬಂಡಿ ಕ್ಯಾಂಪ್, ದೇವಘಾಟ್, ಅಯೋಧ್ಯ ಬಳಿ ನದಿಯಲ್ಲಿ ನೀರು ಹರಿವು ಪ್ರಮಾಣ ಹೆಚ್ಚಾಗಿದೆ. ತಳವಾರ ಘಟ್ಟ, ನವವೃಂದಾನವನಗಡ್ಡಿ, ಹನುಮನಹಳ್ಳಿ, ಸಣಾಪುರ ಜಲಾಶಯದಲ್ಲಿ ಹರಿಗೋಲು ಮತ್ತು ಯಾಂತ್ರಿಕ ದೋಣಿ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ನದಿ ತೀರದಲ್ಲಿ ಮೀನುಗಾರಿಕೆ ನಿಷೇಧಿಸಿದ್ದು, ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಆನೆಗೊಂದಿ, ಅಯೋಧ್ಯ, ಚಿಕ್ಕಜಂತಕಲ್, ನಾಗೇನಹಳ್ಳಿ, ವಿನೋಭಾನಗರ, ಮತ್ತು ಗೂಗಿ ಬಂಡಿ ಕ್ಯಾಂಪ್ ವ್ಯಾಪ್ತಿಯ ಭತ್ತ ಮತ್ತು ಬಾಳೆ ಗದ್ದೆಗಳಿಗೆ ನೀರು ನುಗ್ಗಿವೆ. ಪ್ರವಾಹ ತೀರದಲ್ಲಿ ಜಾನುವಾರುಗಳನ್ನು ಬಿಡದಂತೆ ಗ್ರಾಪಂನಿಂದ ಡಂಗುರ ಹಾಕಿಸಲಾಗಿದೆ.
ಅಪಾಯಕಾರಿ ಪ್ರವಾಸ: ತಾಲೂಕಿನ ಸಣಾಪುರ ಪ್ರವಾಸಿ ಮಂದಿರ, ಾಲ್ಸ್, ಲೇಕ್ ಬಳಿ ನೀರಿನ ಪ್ರಮಾಣ ಹೆಚ್ಚಾಗಿದ್ದರೂ, ಪ್ರವಾಸಿಗರು ಮತ್ತು ಸ್ಥಳೀಯರ ಸೆಲ್ಫಿ ಹುಚ್ಚು ಮಿತಿ ಮೀರಿದೆ. ಜೀವ ಭಯ ಲೆಕ್ಕಿಸದೇ ನದಿ ತೀರಕ್ಕೆ ಜನರು ಹೋಗುತ್ತಿದ್ದು, ಕಂದಾಯ ಇಲಾಖೆ ನದಿಪಾತ್ರಕ್ಕೆ ನೀರಿನ ಪ್ರಮಾಣ ಹೆಚ್ಚಿಸಲಿದೆ ಎಂದು ಸೂಚನೆ ನೀಡುತ್ತಿದ್ದರೂ, ಪ್ರವಾಸಿಗರು ಮತ್ತು ಸ್ಥಳೀಯರು ಗಂಭೀರ ಪರಿಗಣಿಸುತ್ತಿಲ್ಲ. ಸೆಲ್ಫಿ ಹುಚ್ಚಾಟಕ್ಕೆ ಸ್ಥಳೀಯ ಕೆಲ ಹರಿಗೋಲು ಹಾಕುವವರು ಸಾಥ್ ನೀಡುತ್ತಿದ್ದು, ಲ್ೈಜಾಕೇಟ್‌ಗಳಿಲ್ಲದೇ ಹರಿಗೋಲಿನಲ್ಲಿ ಕರೆದೊಯ್ಯುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಸಣಾಪುರದಲ್ಲಿ ಪಿಡಿಒ ವತ್ಸಲಾ ನೇತೃತ್ವದ ಗ್ರಾಪಂ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೆ, ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ.
ತುಂಗಭದ್ರ ಜಲಾಶಯದಿಂದ ನದಿ ಪಾತ್ರಕ್ಕೆ ಹೆಚ್ಚುವರಿ ನೀರು ಹರಿಸಿದ ಪರಿಣಾಮ ನದಿ ಭರ್ತಿಯಾಗಿವೆ. ನದಿ ಪಾತ್ರದಲ್ಲಿ ಜನ, ಜಾನುವಾರುಗಳ ಪ್ರವೇಶ ನಿಷೇಧಿಸಿದ್ದು, ಮೀನುಗಾರಿಕೆ ನಿರ್ಬಂಧಿಸಲಾಗಿದೆ.
ಎಸ್.ರವಿಅಂಗಡಿ
ಪ್ರಭಾರ ತಹಸೀಲ್ದಾರ್ ಗಂಗಾವತಿ