ಜಿಲ್ಲೆ

ದಾಖಲೆ ಇಲ್ಲದ 60 ಲಕ್ಷ ರೂ. ಜಪ್ತಿ

ಗಂಗಾವತಿ: ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿದ್ದ ಕಾರೊಂದನ್ನು ಗ್ರಾಮೀಣ ಪೊಲೀಸರು ತಾಲೂಕಿನ ಬಸಾಪಟ್ಟಣದಲ್ಲಿ ಶುಕ್ರವಾರ ತಡೆದಿದ್ದು, 60 ಲಕ್ಷ ರೂ. ಜಪ್ತಿ ಮಾಡಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ರಾತ್ರಿ ವೇಳೆ ವಾಹನಗಳನ್ನು ತಪಾಸಿಸುತ್ತಿದ್ದು, ಕೊಪ್ಪಳದಿಂದ ಗಂಗಾವತಿಯತ್ತ ಬರುತ್ತಿದ್ದ ಕಾರು ತಡೆದಾಗ ಹಣ ಇರುವುದು ಪತ್ತೆಯಾಗಿದೆ. ಸೂಕ್ತ ದಾಖಲೆ ಒದಗಿಸದಿದ್ದರಿಂದ ವೆಂಕಟೇಶ ಸಿಂಗನಾಳ್, ವೀರಭದ್ರಪ್ಪ ಪಲ್ಲೇದ್, ವಿರೂಪಾಕ್ಷಗೌಡ ಪಾಟೀಲ್ ಮತ್ತು ಕಾರು ಚಾಲಕ ಅಬ್ದುಲ್ ರಜಾಕ್‌ರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಹಣದೊಂದಿಗೆ 5ಲಕ್ಷ ರೂ. ಮೌಲ್ಯದ ಕಾರೊಂದನ್ನು ಜಪ್ತಿ ಮಾಡಲಾಗಿದೆ.

ಈ ಕುರಿತು ನಗರದ ಡಿವೈಎಸ್ಪಿ ಕಚೇರಿಯಲ್ಲಿ ಎಸ್ಪಿ ಯಶೋಧಾ ವಂಟಿಗೋಡು ಮಾತನಾಡಿ, ಎಲ್ಲ ಜಿಲ್ಲೆಯ ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಹಾಕಲಾಗುತ್ತಿದ್ದು, ಪ್ರತಿ ವಾಹನ ತಪಾಸಿಸಲಾಗುತ್ತಿದೆ. ಹಣ ಸಾಗಿಸುತ್ತಿದ್ದ ವ್ಯಕ್ತಿಗಳು ದಾಖಲೆ ಒದಗಿಸಿಲ್ಲ. ವಿಚಾರಣೆ ಮುಂದುವರಿಸಿದ್ದು, ನಿಗಾವಹಿಸಲಾಗುತ್ತಿದೆ ಎಂದರು. ಡಿವೈಎಸ್ಪಿ ಎಚ್. ಶೇಖರಪ್ಪ, ನಗರ ಪಿಐ ಅಡಿವೇಶ ಎನ್. ಗುದಿಗೊಪ್ಪ, ಗ್ರಾಮೀಣ ಪಿಐ ಎನ್. ಮಂಜುನಾಥ ಇತರರಿದ್ದರು.