ಗಂಗಾವತಿ ತಾಲೂಕಿನ ಹೆಬ್ಬಾಳದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ದುರುಗಮ್ಮ ಹರಿಜನ ಮನೆಯ ಗೋಡೆಯೊಂದು ಕುಸಿದಿರುವುದು.  
ಜಿಲ್ಲೆ

ಮನೆ ಗೋಡೆ ಕುಸಿದು ಮಗು ಸಾವು, ನಾಲ್ವರಿಗೆ ಗಾಯ, ಗಂಗಾವತಿ ತಾಲೂಕಿನಲ್ಲಿ ಭಾರಿ ಮಳೆ

ಗಂಗಾವತಿ: ತಾಲೂಕಿನ ಹೆಬ್ಬಾಳದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ದುರುಗಮ್ಮ ಹರಿಜನ ಅವರ ಮನೆಯ ಗೋಡೆ ಕುಸಿದು ಒಂದೂವರೆ ವರ್ಷದ ಮಗು ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ.

ಸಿಂಧನೂರು ತಾಲೂಕಿನ ಅಮರಾಪುರದ ಪ್ರಶಾಂತಿ ಶರಣಪ್ಪ (1.6) ಮೃತ ಬಾಲಕಿ. ದುರುಗಮ್ಮ ಈರಪ್ಪ ಹರಿಜನ, ಹುಸೇನಪ್ಪ ಈರಪ್ಪ ಹರಿಜನ, ಹನುಮಂತಿ ಶರಣಪ್ಪ ಹರಿಜನ ಮತ್ತು ಕೀರಪ್ಪ ಹುಸೇನಪ್ಪ ಹರಿಜನ ಗಾಯಗೊಂಡಿದ್ದು, ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಬಾಲಕಿ ತಾಯಿ ಹನುಮಂತಿ ಅವರ ತವರು ಮನೆ ಹೆಬ್ಬಾಳ ಆಗಿದ್ದು, ಕುಟುಂಬಸ್ಥರನ್ನು ನೋಡಲು ಬಂದಿದ್ದರು. ರಾತ್ರಿ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿದ ಪರಿಣಾಮ ಬಾಲಕಿ ಸ್ಥಳದಲ್ಲಿ ಮೃತಪಟ್ಟಿದ್ದಾಳೆ.

ಸ್ಥಳಕ್ಕೆ ತಹಸೀಲ್ದಾರ್ ಯು.ನಾಗರಾಜ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ನಂತರ ಆಸ್ಪತ್ರೆಗೆ ತೆರಳಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿತು. ವಿಪತ್ತು ನಿರ್ವಹಣಾ ಅಡಿಯಲ್ಲಿ ಮೃತ ಬಾಲಕಿ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಹಸೀಲ್ದಾರ್ ಯು.ನಾಗರಾಜ್ ತಿಳಿಸಿದ್ದಾರೆ. ಗ್ರಾಪಂ ಅಧ್ಯಕ್ಷ ವೀರೇಶಗೌಡ ಇದ್ದರು.

ಜನಜೀವನ ಅಸ್ತವ್ಯಸ್ತ: ನಗರ ಮತ್ತು ತಾಲೂಕಿನಾದ್ಯಂತ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು. ಮಹೆಬೂಬ್ ನಗರ, ಮುಜಾವರ್ ಕ್ಯಾಂಪ್, ಪಂಪಾನಗರ ಗುಡ್ಡದ ಕ್ಯಾಂಪ್, ಎಚ್‌ಆರ್‌ಎಸ್ ಕಾಲನಿಗಳ ಗುಡಿಸಲುಗಳಿಗೆ ಹಾಗೂ ಬಸವಣ್ಣವೃತ್ತ, ಚಂದ್ರಹಾಸ ಥಿಯೇಟರ್ ಪ್ರದೇಶದಲ್ಲಿ ರಸ್ತೆಗೆ ಚರಂಡಿ ನೀರು ನುಗ್ಗಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು. ಗಂಗಾವತಿಯಲ್ಲಿ 20.5 ಮಿ.ಮೀ., ವಡ್ಡರಹಟ್ಟಿಯಲ್ಲಿ 26 ಮಿ.ಮೀ ಮತ್ತು ಪ್ರಗತಿನಗರದಲ್ಲಿ 87.2 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.