ಜಿಲ್ಲೆ

ಭರವಸೆಯಂತೆ ಆಡಳಿತ ನಡೆಸಲು ಬದ್ಧ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಭರವಸೆಯಂತೆ ಆಡಳಿತ ನಡೆಸಲು ಬದ್ಧನಾಗಿದ್ದು, ಅಧಿಕಾರಕ್ಕೆ ಬಂದರೆ ಕಾಲಮಿತಿಯೊಳಗೆ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಗಾಲಿಜನಾರ್ದನರೆಡ್ಡಿ ಹೇಳಿದರು.

ತಾಲೂಕಿನ ಸಿದ್ದಿಕೇರಿಯ ಕರೇಕಲ್ಲಪ್ಪ ಕ್ಯಾಂಪ್‌ನಲ್ಲಿ ಕೆಆರ್‌ಪಿಪಿಯಿಂದ ಶನಿವಾರ ಆಯೋಜಿಸಿದ್ದ ಗಾಲಿ ಜನಾರ್ದನರೆಡ್ಡಿ ನಡೆ ಗ್ರಾಮೀಣಾಭಿವೃದ್ಧಿ ಕಡೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಹಲವು ವರ್ಷಗಳಿಂದ ವಾಸವಾಗಿರುವ ಜನರಿಗೆ ಹಕ್ಕುಪತ್ರ ಸಮಸ್ಯೆ ಬಗ್ಗೆ ಮಾಹಿತಿಯಿದ್ದು, ಸರ್ಕಾರದ ಯೋಜನೆಗಳು ದೊರೆಯುತ್ತಿಲ್ಲ. ಅಧಿಕಾರಕ್ಕೆ ಬಂದ ವರ್ಷದೊಳಗೆ ಹಕ್ಕು ಪತ್ರಗಳನ್ನು ವಿತರಿಸಿ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಹಳ್ಳಿಗಳಿಗೆ ಭೇಟಿ ನೀಡುವ ಮೂಲಕ ಗ್ರಾಮದ ಅವಶ್ಯಕತೆ ಮತ್ತು ತೊಂದರೆ ಅರಿಯಲು ಸಾಧ್ಯವಿದ್ದು, ಶಾಶ್ವತ ಪರಿಹಾರಕ್ಕೆ ಗಮನಹರಿಸಲಾಗುವುದು. ಕೃಷಿ ಉತ್ತೇಜನ, ನಿರುದ್ಯೋಗ ಸಮಸ್ಯೆ ನಿವಾರಣೆ, ಆರೋಗ್ಯ ಶ್ರೀ ಮತ್ತು ಮಹಿಳಾ ಸಬಲೀಕರಣ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಇದಕ್ಕೂ ಮುನ್ನ ತಾಲೂಕಿನ ಆಗೋಲಿ, ವಿಠಲಾಪುರಕ್ಕೆ ತೆರಳಿ ವಿವಿಧ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಬಹಿರಂಗ ಸಭೆ ನಡೆಸಿ, ಗ್ರಾಮದ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರಾಜೇಶ್ವರಿ ಸುರೇಶ, ವಿವಿಧ ಘಟಕದ ಪದಾಧಿಕಾರಿಗಳಾದ ಯಮನೂರಿ ಚೌಡ್ಕಿ, ವೀರೇಶ ಬಲ್ಕುಂದಿ, ಡಿ.ಕೆ.ಆಗೋಲಿ, ಭಾರತಿ ಆಗಲೂರು ಇತರರಿದ್ದರು.

(25 ಜಿವಿಟಿ 04)