ಗಂಗಾವತಿ ತಾಲೂಕಿನ ಕೇಸರಹಟ್ಟಿಯಲ್ಲಿ ಭತ್ತದ ಬೆಳೆ ವೀಕ್ಷಿಸಿದ ಕೃಷಿ ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ತಂಡ, ಕಾಡಿಗೆ ರೋಗ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿತು. ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್, ಕೆವಿಕೆ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ್, ರೈತರಾದ ಭಲರಾಮಗೌಡ, ಪಂಪಯ್ಯಸ್ವಾಮಿ ಹಿರೇಮಠ ಇದ್ದರು. 
ಜಿಲ್ಲೆ

ರೋಗರಹಿತ ಬೀಜಗಳ ಬಿತ್ತನೆ ಉಪಯುಕ್ತ

ಗಂಗಾವತಿ: ತಾಲೂಕಿನ ವಿವಿಧೆಡೆ ಭತ್ತದ ಬೆಳೆಗೆ ಕಾಣಿಸಿಕೊಂಡ ಕಾಡಿಗೆ ರೋಗ ನಿರ್ವಹಣೆಗಾಗಿ ಕೃಷಿ ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತ್ತು. ತಾಲೂಕಿನ ಅರಳಹಳ್ಳಿ, ಕೇಸರಹಟ್ಟಿ ಇತರ ಗ್ರಾಮಕ್ಕೆ ತೆರಳಿ ಭತ್ತ ಫಸಲು ಪರಿಶೀಲಿಸಿತು. ರೋಗ ನಿರ್ವಹಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರೈತರಿಗೆ ಸಲಹೆ ನೀಡಲಾಯಿತು.

ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಮಾತನಾಡಿ, ಭತ್ತ ಕಾಳು ಕಟ್ಟಿದ ನಂತರ ಕಾಣಿಸುವ ಕಾಡಿಗೆ ರೋಗ, ಒಂದು ತೆನೆಯಲ್ಲಿ ಕೆಲವು ಕಾಳುಗಳು ಮಾತ್ರ ರೋಗದ ಲಕ್ಷಣಗಳನ್ನು ತೋರಿಸುತ್ತವೆ. ಇದರ ಹತೋಟಿಗೆ ನಾಟಿ ಮಾಡುವ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದ್ದು, ರೋಗ ರಹಿತ ಬೀಜಗಳನ್ನು ಸಸಿಮಡಿ ಬಿತ್ತನೆಗೆ ಉಪಯೋಗಿಸಬೇಕು. ಬೀಜ ಬಿತ್ತುವುದಕ್ಕೆ ಮೊದಲು 52 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಬಿಸಿನೀರಿನಲ್ಲಿ 10 ನಿಮಿಷ ನೆನೆಸಿ ನಂತರ ಒಣಗಿಸಿ ಸಸಿಮಡಿಯಲ್ಲಿ ಬಿತ್ತಬೇಕೆಂದು ಸಲಹೆ ನೀಡಿದರು.

ರೋಗ ನಿಯಂತ್ರಣಕ್ಕೆ ಬಳಸಬೇಕಾದ ಮುಂಜಾಗ್ರತೆ ಕ್ರಮ ಮತ್ತು ಕೀಟನಾಶಕ ಬಳಕೆ ಕುರಿತು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಮಾಹಿತಿ ನೀಡಿದರು. ರೈತರಾದ ಭಲರಾಮಗೌಡ, ಪಂಪಯ್ಯಸ್ವಾಮಿ ಹಿರೇಮಠ, ಪಂಪಾಪತಿ ಅರಳಳ್ಳಿ, ಅಮರ ನಾಯ್ಕ ಇತರರಿದ್ದರು.