ಗಂಗಾವತಿ: ಪೌರಕಾರ್ಮಿಕ ಕಾಯ್ದೆ ಅನ್ವಯ ಎಲ್ಲ ಸೌಲಭ್ಯಗಳನ್ನು ನೇರವೇತನ ಪಾವತಿ ಕಾರ್ಮಿಕರಿಗೆ ನೀಡಿದ್ದು, ಯಾವುದನ್ನೂ ನಿರ್ಲಕ್ಷಿಸಿಲ್ಲ ಎಂದು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.
ಪೌರ ಕಾರ್ಮಿಕರ ಧರಣಿ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತುರ್ತು ಸಭೆಯಲ್ಲಿ ಮಾತನಾಡಿದರು.
ಡಿಸೆಂಬರ್ 2024ರವರೆಗೆ ವೇತನ ಪಾವತಿಸಿದ್ದು, ಆರೋಗ್ಯ ತಪಾಸಣೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಧರಣಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ. ಕಾಯಂ ಪೌರ ಕಾರ್ಮಿಕರಿಗೆ ಹೆಚ್ಚುವರಿ ಕೆಲಸ ನೀಡಿ, ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ. ಆದರೆ ಧರಣಿ ನಿರತರು ತ್ಯಾಜ್ಯ ವಿಲೇವಾರಿ ಸೇರಿ ಇತರ ವಾಹನಗಳ ಕೀಲಿಕೈಗಳನ್ನು ತಮ್ಮಲ್ಲಿಟ್ಟುಕೊಂಡು, ಸ್ವರ್ಚ್ಛತಾ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ.
ಈ ಬಗ್ಗೆ ನಗರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರ ಮೂಲಕವೇ ಇತ್ಯರ್ಥವಾಗಲಿದೆ. ಧರಣಿ ದುರುದ್ದೇಶದಿಂದ ಕೂಡಿದ್ದು, ಸಂಘಟನೆಯ ಕೆಲವರು ಸ್ವಾರ್ಥಕ್ಕಾಗಿ ಪೌರ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಮಾತನಾಡಿ, ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲಾಗಿದ್ದು, ಜನವರಿ 2025ರ ವೇತನ ಮಾತ್ರ ಬಾಕಿಯಿದೆ. ಪ್ರತಿಷ್ಟೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳುವುದು ಸರಿಯಲ್ಲ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ನಗರಸಭೆ ಸದಸ್ಯರಾದ ಪರಶುರಾಂಮಡ್ಡೇರ್, ಸೋಮನಾಥ ಭಂಡಾರಿ, ಮುಷ್ತಾಕ್ ಅಹ್ಮದ್ ಇತರರಿದ್ದರು.
ಧರಣಿ ತಾತ್ಕಾಲಿಕ ಹಿಂದಕ್ಕೆ: ಬೇಡಿಕೆಗಳ ಈಡೇರಿಕೆಗೆ ನಗರಸಭೆ ಆಡಳಿತ ಮಂಡಳಿ ವಾರದ ಗಡವು ಕೇಳಿದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿಯನ್ನು ತಾತ್ಕಾಲಿಕ ಹಿಂಪಡೆಯಲಾಗಿದೆ ಎಂದು ಎಐಸಿಸಿಟಿಯು ಜಿಲ್ಲಾಧ್ಯಕ್ಷ ವಿಜಯ ದೊರೈರಾಜು ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ನಗರಸಭೆ ವ್ಯಾಪ್ತಿಯ ವಿವಿಧ ಘಟಕಗಳಲ್ಲಿ ಸ್ವಚ್ಛತಾ ಕೆಲಸ ಮಾಡುವ ಕಾರ್ಮಿಕರಿಗೆ ಬಾಕಿ ವೇತನ ಸೇರಿ ಇತರ ಬೇಡಿಕೆಗಳಿಗಾಗಿ ಧರಣಿ ಆರಂಭಿಸಲಾಗಿತ್ತು. ಹಕ್ಕೋತ್ತಾಯಗಳಿಗೆ ಸ್ಪಂದಿಸಿದ ಅಧ್ಯಕ್ಷ ಮತ್ತು ಪೌರಾಯುಕ್ತರು ಬೇಡಿಕೆಗಳ ಈಡೇರಿಕೆಗೆ ಗಡವು ಕೇಳಿರುವ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಗಿದೆ. ನಿರ್ಲಕ್ಷಿಸಿದರೆ ಪುನಃ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.