ಗಂಗಾವತಿ: ಕಡೇಬಾಗಿಲು ಬೆಟ್ಟದಲ್ಲಿ ಬುಧವಾರ ಎರಡು ಚಿರತೆಗಳು ಒಟ್ಟಾಗಿ ಕಾಣಿಸಿಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಗ್ರಾಮದ ವಸತಿ ಶಾಲೆ ಮೇಲ್ಭಾಗದಲ್ಲಿ ಚಿರತೆಗಳಿದ್ದು, ದಾರಿಯಲ್ಲಿ ಹೋಗುತ್ತಿದ್ದವರು ವಿಡಿಯೋ ಮಾಡಿಕೊಂಡಿದ್ದಾರೆ. ಬೆಟ್ಟ ಪ್ರದೇಶದಲ್ಲಿ ಚಿರತೆಗಳಿರುವುದು ಗೊತ್ತಿದ್ದರೂ ಹಗಲಲ್ಲೇ, ಗ್ರಾಮ ಸಮೀಪದಲ್ಲಿ ಕಾಣಿಸಿಕೊಂಡಿರಲಿಲ್ಲ. ಕೆಲ ತಿಂಗಳ ಹಿಂದೆ ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ನಂತರ ಸಿದ್ದಿಕೇರಿ ಬಳಿ ಪ್ರತ್ಯಕ್ಷವಾಗಿತ್ತು. ಅರಣ್ಯ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಿದ್ದಿದ್ದರಿಂದ ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದರು. ಕಾರ್ಮಿಕರೇ ಹೆಚ್ಚಾಗಿರುವ ಕಡೇಬಾಗಿಲಿನಲ್ಲಿ ಸರ್ಕಾರಿ ಕಿ.ಪ್ರಾ. ಶಾಲೆಯಿದ್ದು, ಶಿಕ್ಷಕರ ವಸತಿ ಗೃಹಗಳು, ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯವಿದೆ. ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕರಡಿ ದಾಂಧಲೆ: ಸಣಾಪುರದ ಶ್ರೀಶಾರದಾ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲೆಗೆ ಬುಧವಾರ ರಾತ್ರಿ ಕರಡಿ ನುಗ್ಗಿ ದಾಂಧಲೆ ನಡೆಸಿದೆ. ಶಾಲೆ ಬಾಗಿಲು, ಖುರ್ಚಿಗಳನ್ನು ಮುರಿದಿದ್ದಲ್ಲದೆ ಕೆಲ ದಾಖಲೆಗಳನ್ನು ಕಿತ್ತಾಡಿದೆ. ಕರಡಿ ಓಡಾಡಿರುವ ಹೆಜ್ಜೆಗುರುಗಳು ಕಂಡು ಬಂದಿದ್ದು, ಸ್ಥಳೀಯರು ಕೂಗಾಡಿ ಓಡಿಸಿದ್ದಾರೆ. ಈ ಬಗ್ಗೆ ಶಾಲಾಡಳಿತ ಮಂಡಳಿ ಮುಖ್ಯಸ್ಥೆ ರಾಜೇಶ್ವರಿ ಸುರೇಶ ಮಾತನಾಡಿ, ಕರಡಿ ದಾಳಿ ನಡೆಸಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದು, ಶಾಲೆಯ ಕೆಲ ವಸ್ತುಗಳನ್ನು ನಾಶಮಾಡಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ ಎಂದರು.