ಗಂಗಾವತಿ: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಮದ್ಯದ ಅಕ್ರಮ ಮಾರಾಟ ನಿಯಂತ್ರಿಸುವಂತೆ ಒತ್ತಾಯಿಸಿ ಕೃಷಿ ಕರ್ನಾಟಕ ರೈತ ಸಂಘದ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ವಿವಿಧ ಗ್ರಾಮಗಳ ಮಹಿಳೆಯರೊಂದಿಗೆ ಹಳೇ ಪ್ರವಾಸಿ ಮಂದಿರದಿಂದ ವೃತ್ತದವರೆಗೆ ಮದ್ಯಬಾಟಲಿಯೊಂದಿಗೆ ಪ್ರತಿಭಟನೆ ನಡೆಸಿದ ಸದಸ್ಯರು, ಅಬಕಾರಿ ನಿರೀಕ್ಷಕ ಅಜಯ ಉಮೇದಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷರಾದ ಬಸವರಾಜ್ ಬಿಲ್ಗಾರ್ ಮತ್ತು ಶರಣಪ್ಪ ದೊಡ್ಮನಿ ಮಾತನಾಡಿ, ವಾರ್ಡ್ ಮತ್ತು ಗ್ರಾಮಗಳಲ್ಲಿ ಅಕ್ರಮ ಮದ್ಯಮಾರಾಟ ಮಿತಿ ಮೀರಿದೆ. ಪಾನ್‌ಶಾಪ್, ಕಿರಾಣಿ ಅಂಗಡಿಗಳಲ್ಲೂ ಮದ್ಯ ಸಿಗುವಂತಾಗಿದೆ. ಎಲ್ಲೆಂದರಲ್ಲಿ ಮದ್ಯ ಮಾರಾಟ ಕೇಂದ್ರಗಳು ತಲೆ ಎತ್ತಿವೆ. ಇದರಿಂದ ಕೃಷಿಕರು, ಕಾರ್ಮಿಕರು ಮತ್ತು ಯುವಕರು ಹಾಳಾಗುತ್ತಿದ್ದಾರೆ. ಅಕ್ರಮ ಮದ್ಯದ ಮಾರಾಟಕ್ಕೆ ಅಬಕಾರಿ ಸಿಬ್ಬಂದಿ ಕುಮ್ಮಕ್ಕು ನೀಡುತ್ತಿದ್ದು, ಕ್ರಮಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಅನೇಕ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಅಬಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪದಾಧಿಕಾರಿಗಳಾದ ಮೋಹನ ಹಾಲಸಮುದ್ರ, ವೀರೇಶ ಕತ್ತಿ, ಲಕ್ಷ್ಮಣ ಹಿರೇಮಠ, ವಿಠ್ಠಲ ಬಸಾಪುರ, ರಮೇಶ, ನಿರ್ಮಲಾ ಇತರರಿದ್ದರು.