ಗಂಗಾವತಿ: ಪಟ್ಟಣದಲ್ಲಿ ಈ ವರ್ಷ ಹೋಳಿ ಹಬ್ಬದ ಸಂಭ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶನಿವಾರ ನಡೆದ ಬಣ್ಣದಾಟದಲ್ಲಿ ಕಡಿಮೆ ಜನರು ಭಾಗವಹಿಸಿದ್ದರು.
ಮನ್ಮಥ (ಕಾಮ)ಯುವಕ ಸಂಘದಿಂದ ಪ್ರತಿಷ್ಠಾಪಿಸಿದ ಕಾಗದ ಪ್ರತಿರೂಪದ ಕಾಮನನ್ನು ಶುಕ್ರವಾರ ಮಧ್ಯರಾತ್ರಿ ವಿಶೇಷ ಪೂಜೆ ಸಲ್ಲಿಸಿದ ದಹಿಸಲಾಯಿತು.
ಮೊದಲ ಬಾರಿಗೆ ವಿಜಯವೃಂದ ಯುವಕ ಸಂಘ ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಓಕುಳಿಯಾಟಕ್ಕೆ ಡಿಜೆ ಸಾಥ್ ನೀಡಿದ್ದು, ನಿರೀಕ್ಷೆಗೆ ತಕ್ಕಂತೆ ಯುವಕರು ಭಾಗವಹಿಸಿರಲಿಲ್ಲ. ಪೊಲೀಸರ ವಿರೋಧದ ನಡುವೆಯೂ ಓಕುಳಿಯಾಟ ನಡೆದಿದ್ದು, ಪೊಲೀಸರು ಸೂಚಿಸಿದ್ದ ಯಾವ ಷರತ್ತುಗಳನ್ನು ಆಯೋಜಕರು ಪಾಲಿಸಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕ್ರೀಡಾಂಗಣದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು.
ಬನ್ನಿಗಿಡದ ಕ್ಯಾಂಪ್‌ನಲ್ಲಿ ಯುವಕರ ಬಳಗ ಹಮ್ಮಿಕೊಂಡಿದ್ದ ಬಣ್ಣದ ಮಡಕೆ ಒಡೆಯುವ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯುವಕರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಹೇರೂರು ಓಣಿಯಲ್ಲಿ ವಿಪ್ರ ಸಮಾಜ, ಕೆಂಚನಗುಡ್ಡದ ಓಣಿಯಲ್ಲಿ ಮಹಿಳೆಯರು, ಜಯನಗರದ ಗುಡ್ಡದ ಕ್ಯಾಂಪ್‌ನಲ್ಲಿ ಯುವಕರ ಬಳಗದವರು ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಬಣ್ಣದೊಕುಳಿಗೆ ನೀರಸ ವ್ಯಕ್ತವಾಗಿದ್ದು, ಹೋಳಿ ಉತ್ಸವ ಸಮಿತಿಯವರೇ ಪಾಲ್ಗೊಳ್ಳಲಿಲ್ಲ. ಅರಿಹಂತ ಕಾಲನಿಯಲ್ಲಿ ಜೈನ್ ಸಮಾಜದಿಂದ ಹೋಳಿ ನಿಮಿತ್ತ ಸಂಪ್ರದಾಯಕ ನೃತ್ಯ ಆಯೋಜಿಸಲಾಗಿತ್ತು.
ತಾಲೂಕಿನ ಆನೆಗೊಂದಿ, ಸಣಾಪುರದಲ್ಲಿ ಬಣ್ಣದೋಕುಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಥಳೀಯರೊಂದಿಗೆ ಕೆಲ ವಿದೇಶಿಗರೂ ಬಣ್ಣ ಹಚ್ಚಿ ಸಂಭ್ರಮಿಸಿದರು. ತುಂಗಭದ್ರಾ ನದಿ ಎಡದಂಡೆ ಕಾಲುವೆಯಲ್ಲಿ ನೀರಿಲ್ಲದಿದ್ದರಿಂದ ಬಣ್ಣದಾಟದಲ್ಲಿ ಪಾಲ್ಗೊಂಡುವರು ಸ್ನಾನಕ್ಕಾಗಿ ಪರದಾಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಪ್ರಮುಖ ಪ್ರಾರ್ಥನಾ ಸ್ಥಳ ಮತ್ತು ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.