ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಹುಂಡಿಯಲ್ಲಿ 26.57 ಲಕ್ಷ ರೂ. ಸಂಗ್ರಹವಾಗಿದ್ದು, ಅದರಲ್ಲಿ ವಿದೇಶಿ ನಾಣ್ಯಗಳಿವೆ.
ದೇವಾಲಯದಲ್ಲಿ ಕಂದಾಯ ಮತ್ತು ದೇವಾಲಯ ಸಮಿತಿ ಸಿಬ್ಬಂದಿ ನೇತೃತ್ವದಲ್ಲಿ ಹುಂಡಿಯನ್ನು ಮಂಗಳವಾರ ತೆರೆಯಲಾಗಿದ್ದು, 40 ದಿನಗಳಲ್ಲಿ 26,57,017 ರೂ. ಸಂಗ್ರಹವಾಗಿದೆ. ದುಬೈ, ಮಲೇಶಿಯಾ, ಅಮೆರಿಕಾದ ಮೂರು ನಾಣ್ಯಗಳಿದ್ದು, ಮೌಲ್ಯ ಗೊತ್ತಾಗಿಲ್ಲ. ಭದ್ರತೆ ದೃಷ್ಟಿಯಿಂದ ತಿಂಗಳಿಗೊಮ್ಮೆ ಹುಂಡಿ ತೆರೆಯಲಾಗುತ್ತಿದ್ದು, ಸಿಸಿ ಕ್ಯಾಮರಾಗಳ ಬಂದೋಬಸ್ತ್‌ನಲ್ಲಿ ಹುಂಡಿ ಹಣ ಎಣಿಸಲಾಯಿತು. ಸಂಗ್ರಹವಾದ ಹಣವನ್ನು ಸಣಾಪುರದ ಪಿಕೆಜಿಬಿ ಶಾಖೆಯಲ್ಲಿ ಜಮೆ ಮಾಡಲಾಯಿತು.
ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ದೇವಾಲಯಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಕ್ತರ ಸಂಖ್ಯೆ ಅನುಗುಣ ಪ್ರಸಾದ ವಿತರಣೆ ಪ್ರಮಾಣ ಹೆಚ್ಚಿಸಲಾಗಿದೆ ಎಂದರು.
ಮೇ 25ರಂದು ಹುಂಡಿ ತೆರೆದಾಗ ರೂ. 28.79 ಲಕ್ಷ ರೂ. ಸಂಗ್ರಹವಾಗಿತ್ತು. ಶಿರಸ್ತೇದಾರರಾದ ಅನಂತ ಜೋಶಿ, ರವಿಕುಮಾರ ನಾಯಕ್ವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕ ಮಹೇಶ್ ದಲಾಲ್, ಸಿಬ್ಬಂದಿ ಗುರುರಾಜ, ಶ್ರೀಕಂಠ, ಇಂದಿರಾ, ಅನ್ನಪೂರ್ಣಾ, ಮಹ್ಮದ್ ರಫಿಕ್ ಇತರರಿದ್ದರು.