ಗಂಗಾವತಿ ಕಸಾಪ ಭವನದಲ್ಲಿ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ ಆಯೋಜಿಸುತ್ತಿರುವ 7ನೇ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಹೆಬ್ಬಾಳ ಬೃಹನ್ಮಠದ ನಾಗೂಭೂಷಣ ಶಿವಾಚಾರ್ಯರು ಶುಕ್ರವಾರ ಮಾತನಾಡಿದರು. ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ್ ಸೇಡಂ, ಮಾಜಿ ಸಂಸದ ಎಸ್.ಶಿವರಾಂನಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಇತರರಿದ್ದರು. 
ಜಿಲ್ಲೆ

ಕಕ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಸಮಾಜಮುಖಿ ಕಾರ್ಯಗಳು ಸಂಸ್ಥೆಗಳನ್ನು ಉತ್ತುಂಗಕ್ಕೇರಿಸುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ಹೆಬ್ಬಾಳ ಬೃಹನ್ಮಠದ ಡಾ.ನಾಗಭೂಷಣ ಶಿವಾಚಾರ್ಯರು ಹೇಳಿದರು.

ನಗರದ ಕಸಾಪ ಭವನದಲ್ಲಿ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿಯಿಂದ ಆಯೋಜಿಸುತ್ತಿರುವ 7ನೇ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಶರಣರ ಬೀಡಾದ ಕಲ್ಯಾಣ ಕರ್ನಾಟಕ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದು, ಹಿಂದುಳಿದ ವರ್ಗದ ಹಣೆಪಟ್ಟಿಯನ್ನು ವಿಕಾಸ ಅಕಾಡೆಮಿ ಅಳಿಸುವ ಕೆಲಸ ಮಾಡುತ್ತಿದೆ. ಶೈಕ್ಷಣಿಕ ಅಭಿವೃದ್ಧಿ ಮೂಲಕ ನಿರುದ್ಯೋಗ ನಿವಾರಣೆ ಮಾಡುತ್ತಿದೆ. ತರಬೇತಿ ಶಿಬಿರಗಳ ಮೂಲಕ ಯುವಕ ಮತ್ತು ಯುವತಿಯರನ್ನು ಅಭಿವೃದ್ಧಿಯ ಮುಖ್ಯವಾಹಿನಿಯತ್ತ ತರುತ್ತಿದೆ ಎಂದರು.

ರಾಜ್ಯ ಸಭಾ ಮಾಜಿ ಸದಸ್ಯ ಹಾಗೂ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಸಂಸ್ಕೃತಿ ಉತ್ಸವ ಮೂಲಕ ದೇಶಿ ಪರಂಪರೆ ಅನಾವರಣಗೊಳಿಸಲಾಗುತ್ತಿದ್ದು, 9 ದಿನಗಳ ಕಾರ್ಯಕ್ರಮದಲ್ಲಿ ಶಿಕ್ಷಣ, ಉದ್ಯೋಗ, ಕೃಷಿ, ಕ್ರೀಡೆ ಸೇರಿ ವೈವಿಧ್ಯಮಯ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. ಸಮಿತಿ ಮತ್ತು ಅಕಾಡೆಮಿಯಿಂದ ಕಳೆದ 20ವರ್ಷಗಳಲ್ಲಿ 200 ಕೋಟಿ ರೂ. ವೆಚ್ಚದ ಸ್ವಾವಲಂಬಿ ಯೋಜನೆಗಳನ್ನು ಆಯೋಜಿಸಲಾಗಿದೆ. ಸರ್ಕಾರದಿಂದ ನೆರವು ಪಡೆಯದೇ ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದರು.

ಸಮಿತಿಯಿಂದ ಹಮ್ಮಿಕೊಂಡ ಭಾರತೀಯ ಸಂಸ್ಕೃತಿ ಉತ್ಸವ, ಶ್ರೀಕೊತ್ತಲ ಸ್ವರ್ಣ ಜಯಂತ್ಯುತ್ಸವ, ಕಲ್ಯಾಣ ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕ ಪರಣ್ಣಮುನವಳ್ಳಿ, ಅಕಾಡೆಮಿ ಜಿಲ್ಲಾಧ್ಯಕ್ಷ ವಿ.ಎಂ.ಭೂಸನೂರ್‌ಮಠ, ತಾಲೂಕು ಅಧ್ಯಕ್ಷ ವೀರೇಶ ಮ್ಯಾಗೇರಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಇತರರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ವಿಎಸ್ಸೆಸ್ಸೆನ್ ಮಾಜಿ ನಿರ್ದೇಶಕ ರಮೇಶ ಕುಲ್ಕರ್ಣಿ ಕಾರ್ಯಕ್ರಮ ನಿರ್ವಹಿಸಿದರು. ಸರಿಗಮಪ ಗಾಯಕ ಅರ್ಜುನ್ ಇಟಗಿಯಿಂದ ಗಾಯನ ಜರುಗಿತು.