ಗಂಗಾವತಿಯಲ್ಲಿ ವಿಎಚ್‌ಪಿ ಮತ್ತು ಬಜರಂಗ ದಳ ನೇತೃತ್ವದಲ್ಲಿ ಹನುಮ ಮಾಲಾಧಾರಿಗಳಿಂದ ಸಂಕೀರ್ತನೆ ಯಾತ್ರೆ ಶುಕ್ರವಾರ ಜರುಗಿತು. ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ನಗರಸಭೆ ಸದಸ್ಯರಾದ ರಮೇಶ ಚೌಡ್ಕಿ, ವಾಸುದೇವ ನವಲಿ, ನೀಲಕಂಠಪ್ಪ ಕಟ್ಟಿಮನಿ ಇತರರಿದ್ದರು.  
ಜಿಲ್ಲೆ

ಹಿಂದು ಸಮಾಜ ಅಂತ್ಯಗೊಳಿಸಲು ಸಂಚು, ವಿಎಚ್‌ಪಿ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ ಮಂಜುನಾಥ ಬೆಂಗಳೂರು ಹೇಳಿಕೆ

ಗಂಗಾವತಿ: ಸಂಘಟನೆ ಕೊರತೆಯಿಂದ ಹಿಂದು ಸಮಾಜವನ್ನು ಅಂತ್ಯಗೊಳಿಸಲು ಮೂಲಭೂತವಾದಿಗಳು ಸಂಚು ನಡೆಸಿದ್ದು, ಹಲವು ಅಕ್ರಮಣಗಳಾದರೂ ಹಿಂದುತ್ವ ಇನ್ನೂ ಗಟ್ಟಿಯಾಗಿದೆ ಎಂದು ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ ಮಂಜುನಾಥ ಬೆಂಗಳೂರು ಹೇಳಿದರು.

ನಗರದ ಬಾಬೂ ಜಗಜೀವನರಾಮ್ ವೃತ್ತದಲ್ಲಿ ಹನುಮಮಾಲೆ ವಿಸರ್ಜನೆ ನಿಮಿತ್ತ ವಿಶ್ವಹಿಂದು ಪರಿಷತ್ ಮತ್ತು ಭಜರಂಗ ದಳದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ದೇಶ ಮತ್ತು ದೈವ ಭಕ್ತಿಯೊಂದಿಗೆ ಸಂಘರ್ಷಕ್ಕಿಳಿಯಬೇಕಿದ್ದು, ಸಂಘಟನಾತ್ಮಕವಾಗಿ ಹಿಂದು ಸಮಾಜ ಬಲಿಷ್ಠಗೊಳಿಸಬೇಕು. ಲವ್, ಲ್ಯಾಂಡ್ ಮತ್ತು ವೋಟ್ ಬ್ಯಾಂಕ್ ಜೀಹಾದ್ ಮೂಲಕ ಹಿಂದುತ್ವ ತುಳಿಯುವ ತಂತ್ರಗಳು ನಡೆಯುತ್ತಿವೆ. ಸಮಾಜ ದುರ್ಬಲವಲ್ಲ, ಅಸಹಾಯಕತೆಯಿಂದ ಹೊರಬರಬೇಕಿದೆ.

ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ಸಂಘರ್ಷ, ದೇಶದಲ್ಲೂ ನಡೆದರೂ ಅಚ್ಚರಿಪಡಬೇಕಿಲ್ಲ. ನಮ್ಮದು ಸೋಲಿನ ದೇಶವಲ್ಲ, ಸಂಘರ್ಷ-ಸ್ವಾಭಿಮಾನದ ದೇಶ. ಮೈ ಮರೆತಿದ್ದು ಸಾಕು, ಧಾರ್ಮಿಕ ಕಾರ್ಯಕ್ರಮಗಳ ಮೂಲಕವಾದರೂ ಸಂಘಟಿತರಾಗೋಣ. ಇಸ್ಲಾಮಿಕ್ ಕೆಟ್ಟದಲ್ಲ, ಆದರೆ ಜೀಹಾದಿ ಮನಸ್ಥಿತಿಯ ಮೂಲಭೂತವಾದಿಗಳಿಂದ ಇಸ್ಲಾಂಗೆ ಕೆಟ್ಟ ಹೆಸರು ಬಂದಿದೆ. ಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಬೇಕಿದ್ದು, ದೇಶದ ಮೂಲೆಮೂಲೆಯಿಂದಲೂ ಜನ ಅಂಜನಾದ್ರಿ ಬೆಟ್ಟಕ್ಕೆ ಬರುವಂತಹ ಧಾರ್ಮಿಕ ಕಾರ್ಯಕ್ರಮಗಳಾಗಬೇಕಿದೆ ಎಂದರು.

ಧಾರ್ಮಿಕ ಸಭೆ ಉದ್ದೇಶ ಮತ್ತು ಕಾರ್ಯಕ್ರಮ ಆಯೋಜನೆ ಕುರಿತು ಬಜರಂಗ ದಳ ಜಿಲ್ಲಾ ಕಾರ್ಯದರ್ಶಿ ವಿನಯ್ ಪಾಟೀಲ್ ಮಾಹಿತಿ ನೀಡಿದರು. ವಿಎಚ್‌ಪಿ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜ ಶರಣಬಸಪ್ಪ ಅಪ್ಪ, ಪ್ರಾಂತ ಕಾರ್ಯದರ್ಶಿ ಶಿವಕುಮಾರ ಭೋಳಶೆಟ್ಟಿ, ಧರ್ಮ ಪ್ರಸಾರ ವಿಭಾಗದ ರಾಜ್ಯ ಸಂಯೋಜಕ ಸೂರ್ಯನಾರಾಯಣ, ಭಜರಂಗ ದಳ ಉತ್ತರ ಪ್ರಾಂತ ಸಂಯೋಜಕ ಪುಂಡಲೀಕ ದಳವಾಯಿ ಇತರರಿದ್ದರು.

ಮುಸ್ಲಿಮರಿಂದ ಮಾಲಾಧಾರಿಗಳಿಗೆ ಪುಷ್ಪವೃಷ್ಟಿ

ಇದಕ್ಕೂ ಮುನ್ನ ವಿಎಚ್‌ಪಿ ಮತ್ತು ಬಜರಂಗ ದಳ ನೇತೃತ್ವದಲ್ಲಿ ನಗರದ ಎಪಿಎಂಸಿ ಸಮುದಾಯ ಭವನದಿಂದ ಬಾಬೂ ಜಗಜೀವನರಾಮ್ ವೃತ್ತದವರೆಗೆ ಮಾಲಾಧಾರಿಗಳಿಂದ ಶ್ರೀ ಹನುಮ ಮೂರ್ತಿಯೊಂದಿಗೆ ಸಂಕೀರ್ತನೆ ಯಾತ್ರೆ ಜರುಗಿತು. ಯಾತ್ರೆಯುದ್ದಕ್ಕೂ ಶ್ರೀರಾಮ, ಹನುಮ ಜಪ ನಡೆಸಿದ ಭಕ್ತರು, ಭಜನೆ ಮೂಲಕ ಗಮನಸೆಳೆದರು. ಬೆಳಗಾವಿ, ಬೀದರ್, ಕಲಬುರಗಿ ಭಾಗದಿಂದ ಹೆಚ್ಚಿನ ಭಕ್ತರು ಬಂದಿದ್ದರು. ಮಸೀದಿ ಬಳಿ ಹೆಚ್ಚುಕಾಲ ಭಜನೆ ಮಾಡಿ ಪಾಕಿಸ್ತಾನ ವಿರುದ್ಧ ೋಷಣೆ ಕೂಗಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿ ಬಳಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಗಾಂಧಿ ವೃತ್ತದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮಾಲಾಧಾರಿಗಳ ಮೇಲೆ ಪುಷ್ಪವೃಷ್ಟಿ ಸುರಿಸುವ ಮೂಲಕ ಸಾಮರಸ್ಯ ಮೆರೆದರು. ಎಲ್ಲ ವೃತ್ತಗಳನ್ನು ಹೂಗಳಿಂದ ವಿಶೇಷ ಅಲಂಕರಿಸಲಾಗಿತ್ತು. ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಸದಸ್ಯ ಮುಷ್ತಾಕ್ ಅಹ್ಮದ್, ಮುಖಂಡರಾದ ಸೈಯದ್‌ಅಲಿ, ಅಜರ್ ಅನ್ಸಾರಿ ಇತರರಿದ್ದರು.