ಗಂಗಾವತಿ: ದೀಪಾವಳಿ ಹಬ್ಬದ ಬಲಿಪಾಡ್ಯಮಿ ನಿಮಿತ್ತ ತಾಲೂಕಿನ ಅಂಜನಾದ್ರಿ ಬೆಟ್ಟದ ಪಾದಗಟ್ಟೆಯಲ್ಲಿ ಮುಜರಾಯಿ ಇಲಾಖೆಯಿಂದ ಗೋಪೂಜೆ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ಮೂರ್ತಿಗೆ ಅಭಿಷೇಕ, ಹೂವಿನ ಅಲಂಕಾರ, ಹನುಮಾನ್ ಚಾಲೀಸಾ ಪಾರಾಯಣ ನೆರವೇರಿಸಿದ ನಂತರ ಪಾದಗಟ್ಟೆಯಲ್ಲಿ ಗೋಪೂಜೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವ್ಯವಸ್ಥಾಪಕ ಎಂ.ವೆಂಕಟೇಶ, ಸಹಾಯಕರಾದ ಬಸವರಾಜ, ಅಜೀತಕುಮಾರ, ಅರ್ಚಕ ಪವನಜೋಶಿ ಇತರರಿದ್ದರು. ಸರ್ಕಾರದ ಅಧಿಸೂಚನೆಯಂತೆ ಮುಜರಾಯಿ ಇಲಾಖೆಗೊಳಪಡುವ ಹಿರೇಜಂತಕಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ, ಪಂಪಾಸರೋವರದ ಶ್ರೀ ಜಯಲಕ್ಷ್ಮೀ ದೇವಾಲಯದಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿರುಪಾಪುರ ತಾಂಡಾ: ನಗರದ ವಿರುಪಾಪುರ ತಾಂಡಾದಲ್ಲಿ ಬಂಜಾರ ಸಮಾಜದಿಂದ ಬಲಿಪಾಡ್ಯಮಿಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಯುವಕರು ಮತ್ತು ಯುವತಿರು ಬೆಟ್ಟಕ್ಕೆ ತೆರಳಿ ಉತ್ರಾಣಿ ಕಡ್ಡಿ, ಹೊನ್ನಬರಿ ಹೂವನ್ನು ಪುಟ್ಟಿಯಲ್ಲಿ ಹೊತ್ತು ತಾಂಡಾಕ್ಕೆ ತಂದಿದ್ದು, ಸಾಂಪ್ರದಾಯಿಕ ಉಡುಗೆಯೊಂದಿಗೆ ಯುವತಿಯರು ಪ್ರದರ್ಶಿಸಿದ ನೃತ್ಯ ಗಮನಸೆಳೆಯಿತು.
ಆಚರಣೆ ಕುರಿತು ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪಾಂಡು ನಾಯ್ಕ ಮಾಹಿತಿ ನೀಡಿದರು. ಗೋರಾ ಸೇನಾ ರಾಜ್ಯ ಉಪಾಧ್ಯಕ್ಷ ಶಿವಪ್ಪ ಜಾಗೋಗೋರ್, ಮುಖಂಡರಾದ ಹನುಮಂತಪ್ಪ, ಕೃಷ್ಣನಾಯ್ಕ, ರವಿನಾಯ್ಕ, ವೆಂಕಟೇಶ ಜಾಧವ್, ಕೆ.ಆರ್. ಸಂತೋಷ, ವಿನೋದ್, ರಾಘು, ರಾಜಕುಮಾರ, ವೆಂಕಣ್ಣ, ವೆಂಕಟೇಶ, ಮಂಜುನಾಥ ಇತರರಿದ್ದರು.
ನಗರದ ಗೌಳಿ ಸಮಾಜದಿಂದ ದೀಪಾವಳಿ ಹಬ್ಬ ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದು, ಕುಲಕಸುಬಿಗೆ ಆಧಾರವಾದ (ಹಾಲುಮಾರಾಟ) ಎಮ್ಮೆ, ಕೋಣಗಳನ್ನು ವಿಶೇಷವಾಗಿ ಅಲಂಕರಿಸಿ, ನಗರದಾದ್ಯಂತ ಮೆರವಣಿಗೆ ಮಾಡಲಾಯಿತು. ನಂತರ ವಿವಿಧ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.