ಗಂಗಾವತಿ: ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ರೂಪಿಸಿರುವ ಉಪಸಮಿತಿ ಸದಸ್ಯರು ಪರಸ್ಪರ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಬೇಕಿದ್ದು, ಲೋಪವಾಗದಂತೆ ಎಚ್ಚರಿಕೆವಹಿಸಲು ಜಿಪಂ ಸಿಇಒ ಹಾಗೂ ಪ್ರಭಾರ ಡಿಸಿ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ತಾಲೂಕಿನ ವಿರುಪಾಪುರಗಡ್ಡಿ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡ ಉಪಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಡಳಿತ ಸಿದ್ಧಪಡಿಸಿದ ಯೋಜನೆಯಂತೆ ಕರ್ತವ್ಯ ನಿರ್ವಹಿಸಬೇಕಿದ್ದು, ಸಮಸ್ಯೆ ಎದುರಾದಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಸಿಸಿ ಕ್ಯಾಮರಾ ಅಳವಡಿಕೆ, ಆರೋಗ್ಯ ಕಾರ್ಯಕರ್ತರ ನಿಯೋಜನೆ, ಟ್ರಾಫಿಕ್ ಸಮಸ್ಯೆ ನಿವಾರಣೆಯತ್ತ ಗಮನಹರಿಸಬೇಕು ಎಂದು ಸೂಚಿಸಿದರು.
ಭಕ್ತರ ಅನುಕೂಲಕ್ಕಾಗಿ ವಿದ್ಯುತ್ ದೀಪದ ವ್ಯವಸ್ಥೆ, ಮೊಸಳಗೆಗಳಿರುವ ನದಿ ತೀರದಲ್ಲಿ ಭಕ್ತರು ಹೋಗದಂತೆ ಅರಣ್ಯ ಸಿಬ್ಬಂದಿ ಕಾಳಜಿವಹಿಸಬೇಕು. ನೋಡಲ್ ಅಧಿಕಾರಿಗಳ ನೇಮಕ ಜತೆಗೆ ಪ್ರಸಾದ ವಿತರಣೆ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ನಿರ್ದೇಶಿಸಿದರು.
ಎಸಿ ಕ್ಯಾ.ಮಹೇಶ ಮಾಲಗಿತ್ತಿ ಮಾತನಾಡಿ, ಡಿ.12 ಮತ್ತು 13ರಂದು ಮೂರು ಶ್‌ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚಿಕ್ಕರಾಂಪುರ ವೇದಪಾಠ ಶಾಲೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಿದ್ಧತೆ ಪರಿಶೀಲನೆ: ಇದಕ್ಕೂ ಮುನ್ನ ಅಂಜನಾದ್ರಿ ಬೆಟ್ಟಕ್ಕೆ ತೆರಳಿದ ಜಿಲ್ಲಾಡಳಿತ ಅಧಿಕಾರಿಗಳ ತಂಡ, ಅಲ್ಲಿ ಕೈಗೊಳ್ಳಬೇಕಿರುವ ಅಲಂಕಾರ, ಟ್ರಾಫಿಕ್ ಸಮಸ್ಯೆ ನಿವಾರಣೆ, ವಾಹನ ಪಾರ್ಕಿಂಗ್, ಉಪಹಾರ, ಊಟದ ವ್ಯವಸ್ಥೆ, ಪ್ರಸಾದಕ್ಕಾಗಿ ಲಡ್ಡು ತಯಾರಿಕೆ ಘಟಕ ವೀಕ್ಷಿಸಿತು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ನಿರ್ವಹಣೆ ಸಮಿತಿ ಸೂಚಿಸಿತು.
ಎಸ್ಪಿ ಡಾ. ರಾಮ್ ಎಲ್. ಅರಿಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಜಿಲ್ಲಾ ನಗರಾಭಿವದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಅಬಕಾರಿ ನಿರೀಕ್ಷಕ ಪ್ರಶಾಂತಕುಮಾರ, ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಇತರರಿದ್ದರು.