ಮಾಜಿ ಸಂಸದ ಎಚ್.ಜಿ.ರಾಮುಲು ಅವರ ಗಂಗಾವತಿ ನಿವಾಸಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಂಗಳವಾರ ಭೇಟಿ ನೀಡಿದ್ದು, ರಾಮುಲುರನ್ನು ಸನ್ಮಾನಿಸಿದರು. ಮಾಜಿ ಸಚಿವ ಎಂ.ಮಲ್ಲಿಕಾರ್ಜುನನಾಗಪ್ಪ, ಮುಖಂಡರಾದ ಕೆ.ಕಾಳಪ್ಪ, ಸೈಯದ್ ಇತರರಿದ್ದರು.  
ಜಿಲ್ಲೆ

ಸೌಹಾರ್ದ ಭೇಟಿ ಬೇರೇನಿಲ್ಲ, ಸಚಿವ ಎಚ್.ಕೆ.ಪಾಟೀಲ್ ಹೇಳಿಕೆ

ಗಂಗಾವತಿ: ಮಾಜಿ ಸಂಸದ ಎಚ್.ಜಿ.ರಾಮುಲು ಅವರ ನಗರ ನಿವಾಸಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಂಗಳವಾರ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ರಾಜಕೀಯ ಭೀಷ್ಮ ಎಂದೇ ಖ್ಯಾತರಾದ ಮಾಜಿ ಸಂಸದ ಎಚ್.ಜಿ.ರಾಮುಲು ರಾಜಕೀಯದಿಂದ ದೂರ ಉಳಿದಿದ್ದು, ಆಧ್ಯಾತ್ಮದತ್ತ ವಾಲಿದ್ದಾರೆ. ಇತ್ತೀಚಿನ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ವಿದ್ಯಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ನಾಯಕತ್ವವನ್ನು ಪ್ರಶ್ನಿಸಿದ್ದಾರೆ. ಇದೀಗ ಸಚಿವ ಎಚ್.ಕೆ.ಪಾಟೀಲ್ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದ್ದು, ಮಾಧ್ಯಮದವರನ್ನು ಹೊರಗಿಟ್ಟು ಪ್ರತ್ಯೇಕವಾಗಿ ಚರ್ಚಿಸಿದರು.

ಸ್ಥಳೀಯ ರಾಜಕೀಯ ವಿದ್ಯಮಾನದ ಬಗ್ಗೆಯೂ ಚರ್ಚೆಯಾಗಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಸಲಹೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ರಾಮುಲುರನ್ನು ಸಚಿವ ಎಚ್.ಕೆ.ಪಾಟೀಲ್ ಸನ್ಮಾನಿಸಿ, ಪಕ್ಷಕ್ಕೆ ಮಾರ್ಗದರ್ಶನ ಮಾಡುವಂತೆ ಮನವಿ ಮಾಡಿದರು. ಸೌಹಾರ್ದ ಭೇಟಿಯಾಗಿದ್ದು, ಯಾವುದನ್ನು ಕಲ್ಪಿಸುವುದು ಬೇಡ ಎಂದು ಎಚ್.ಕೆ.ಪಾಟೀಲ್ ಹೇಳುವ ಮೂಲಕ ಜಾರಿಕೊಂಡರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಡಿಸಿಸಿ ಅಧ್ಯಕ್ಷ ಅಮರೇಗೌಡ ಭಯ್ಯಪುರ, ಮುಖಂಡರಾದ ಕೆ.ಕಾಳಪ್ಪ, ರಮೇಶ ಗೌಳಿ, ಸರ್ವೇಶ ಮಾಂತಗೊಂಡ, ಸೈಯದ್, ಹನುಮಂತರಾಯ, ವೀರನಗೌಡ, ನಾಜಜೀನ್, ಜೀಲಾನ್ ಇತರರಿದ್ದರು.

ಅದ್ದೂರಿ ಸ್ವಾಗತ, ಪರ ವಿರೋಧ ಚರ್ಚೆ: ರಾಮುಲು ನಿವಾಸಕ್ಕೆ ಸಚಿವ ಎಚ್.ಕೆ.ಪಾಟೀಲ್ ಭೇಟಿ ನೀಡುತ್ತಿದ್ದಂತೆ, ಕರ್ನೂಲ ಬಾಬಾ ದರ್ಗಾ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯನ್ನು ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ನೇತೃತ್ವದ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದ್ದು ವಿಶೇಷ. ಬೃಹತ್ ಪ್ರಮಾಣದ ಹೂವಿನ ಹಾರವನ್ನು ಕ್ರೇನ್ ಮೂಲಕ ಸಚಿವರಿಗೆ ಬೆಂಬಲಿಗರು ಹಾಕಿದರಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮನಿಯಾರ್ ಕಚೇರಿಯಲ್ಲಿ ಬೆಂಬಲಿಗರೊಂದಿಗೆ ಸ್ಥಳೀಯ ರಾಜಕೀಯ ವಿದ್ಯಮಾನ ಕುರಿತು ಚರ್ಚಿಸಿದರು.

ನಗರದ ಅಭಿವೃದ್ಧಿ ವಿಚಾರದಲ್ಲಿ ಸಹಕರಿಸುವ ಬಗ್ಗೆ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್ ಹೇಳಿದರು. ಮುಖಂಡರಾದ ಹನುಮಂತಪ್ಪ ಅರಸನಕೇರಿ, ಮಲ್ಲೇಶ ದೇವರಮನಿ, ಆಸ್ಿ ಇತರರಿದ್ದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ವಿರೋಧಿ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮತ್ತು ಮುನಿಸಿಕೊಂಡ ಶಾಮೀದ್ ಮನಿಯಾರ್ ಬೆಂಬಲಿಗರೊಂದಿಗೆ ಸಚಿವದ್ವಯರು ಸಮಾಗಮಗೊಂಡಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿದ್ದರೆ, ಅನ್ಸಾರಿ ವಲಯದಲ್ಲಿ ಪರ, ವಿರೋಧದ ಚರ್ಚೆಗಳು ಶುರುವಾಗಿವೆ. ಇತ್ತೀಚಿಗೆ ಶುರುವಾಗಿರುವ ಅನ್ಸಾರಿ ಆಡಿಯೋ ವಾರ್‌ಗೆ ಟಾಂಗ್ ನೀಡಲು ವಿರೋಧಿಗಳು ಸಚಿವದ್ವಯರನ್ನು ಸತ್ಕರಿಸುವ ಮೂಲಕ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ ಎಂದು ಬೆಂಬಲಿಗರು ವಿಶ್ಲೇಷಿಸಿದ್ದಾರೆ.