ಗಂಗಾವತಿ: ತಾಲೂಕಿನ ಗುಡದೂರಿನ ಹತ್ತಿ ಹೊಲದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಹತ್ತಿ ಬೆಳೆಯಲ್ಲಿ ಕಾಯಿಕೊರಕ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಪರಿಸರ ಸ್ನೇಹಿ ಪದ್ಧತಿಯಿಂದ ಗುಲಾಬಿ ಕಾಯಿಕೊರಕ ನಿರ್ವಹಣೆ ಕುರಿತು ತಜ್ಞರು ಮಾಹಿತಿ ನೀಡಿದರು.
ಕೆವಿಕೆ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ್ ಮಾತನಾಡಿ, ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕ ನಿರ್ವಹಣೆಗೆ ಅತಿಯಾದ ರಾಸಾಯನಿಕ ಬಳಸುವುದು ಸರಿಯಲ್ಲ. ಇದರಿಂದ ರೈತರ ಆರೋಗ್ಯ ಮತ್ತು ಪರಿಸರದ ಮೇಲೆ ಪರಿಣಾಮ ಬೀರಲಿದೆ. ಕಾಯಿಕೊರಕದ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಮೋಹಕ ಪೇಸ್ಟ್ ಬಳಸಿದರೆ ಕೀಟಗಳ ಸಂತಾನೋತ್ಪತ್ತಿಗೆ ಅಡ್ಡಿಯಾಗಲಿವೆ. ಎಕರೆಗೆ 400 ಸ್ಥಳಗಳಲ್ಲಿ ಕಡಲೆ ಕಾಯಿ ಗಾತ್ರದಷ್ಟು ಮೋಹಕ ಪೇಸ್ಟ್ ಹಚ್ಚಬೇಕು. ಬೆಳೆ 40,65 ಮತ್ತು 90 ದಿನಗಳ ಸಂದರ್ಭದಲ್ಲಿ 3 ಬಾರಿ ಮೋಹಕ ವಸ್ತು ಬಳಸಿದರೆ ಕೀಟಬಾಧೆ ನಿಯಂತ್ರಣ ಸಾಧ್ಯ ಎಂದರು.
ಹತ್ತಿಯಲ್ಲಿ ಕಾಣಿಸಿಕೊಳ್ಳುವ ರೋಗಗಳ ಕುರಿತು ಸಸ್ಯರೋಗ ತಜ್ಞೆ ಡಾ.ಆರ್.ಎಂ. ರೇವತಿ ಮಾಹಿತಿ ನೀಡಿದರು. ರೈತ ಸಂಪರ್ಕ ಕೇಂದ್ರದ ಕಷಿ ಅಧಿಕಾರಿಗಳಾದ ನವೀನ್, ಪಂಪಾಪತಿ, ರೈತ ಪ್ರತಿನಿಧಿಗಳಾದ ಹನುಮಂತಪ್ಪ, ಬಸವರಾಜ, ಪಂಪನಗೌಡ, ನಾಗಪ್ಪ, ಯಮನೂರಪ್ಪ ಇತರರಿದ್ದರು.