ಗಂಗಾವತಿ: ನಗರದ ಬಾಬೂ ಜಗಜೀವನರಾಂ ವೃತ್ತದ ಬಳಿಯಿದ್ದ ಹಳೇ ಮರವನ್ನು ಕತ್ತರಿಸುವ ವೇಳೆ ಕೊಂಬೆಯೊಂದು ಭಾನುವಾರ ಮುರಿದಿದ್ದು, ಮರ ಕಡಿಯಲು ಬಳಸಿದ್ದ ಕ್ರೇನ್ ಜಖಂಗೊಂಡಿದೆ.
ಶ್ರೀ ಕೊಟ್ಟೂರು ಬಸವೇಶ್ವರ ದೇವಾಲಯಕ್ಕೆ ಸಂಬಂಧಿಸಿದ ಜಾಗದಲ್ಲಿ ಅತ್ಯಂತ ಹಳೆಯದಾದ ನೀಲಗಿರಿ ಮರವಿದ್ದು, ಅತಿಎತ್ತರವಾಗಿ ಬೆಳೆದಿತ್ತು.
ಅನಾಹುತ ಸಂಭವಿಸಬಾರದೆಂಬ ಉದ್ದೇಶದಿಂದ ಮರಗಳ ಕೊಂಬೆ ಕತ್ತರಿಸುತ್ತಿರುವಾಗ ಬೃಹತ್ ಪ್ರಮಾಣದ ಕೊಂಬೆ ಕ್ರೇನ್ ವಾಹನದ ಮೂಲಕ ಮುರಿದು ಬಿದ್ದಿದ್ದರಿಂದ ಅಪರೇಟರ ಭಾಗದಲ್ಲಿ ಜಖಂಗೊಂಡಿದ್ದು, ಗ್ಲಾಸ್‌ಗಳು ಚೂರಾಗಿವೆ.
ಅಪರೇಟರ್ ಸಾದಿಕ್ ಪಾರಾಗಿದ್ದು, ಗ್ಲಾಸ್ ಚೂರುಗಳು ಮಾತ್ರ ಬಿದ್ದಿವೆ. ಮರ ಕಡಿಯುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಪೊಲೀಸ್ ಪರೀಕ್ಷೆಗೆ ನಿರಂತರ ವಿದ್ಯುತ್ ಪೂರೈಕೆ ಬೇಕಿದ್ದು, ಮಧ್ಯಾಹ್ನದ ನಂತರ ಮರ ಕಡಿಯುವ ಕುರಿತು ಜೆಸ್ಕಾಂ ಎಇ ಶ್ರೀಧರ್, ದೇವಾಲಯದ ಆಡಳಿತ ಮಂಡಳಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕಾಯಿತು. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.