ಗಂಗಾವತಿ: ವಿಜಯನಗರ ಸಾಮ್ರಾಜ್ಯ ನಾಡು-ನುಡಿ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದು, ಸುವರ್ಣ ಯುಗವೆಂದೇ ಖ್ಯಾತಿ ಪಡೆದಿತ್ತು ಎಂದು ಗಂಡುಗಲಿ ಕುಮಾರರಾಮ ಹೋರಾಟ ಸಮಿತಿ ಅಧ್ಯಕ್ಷ ಎಚ್.ರಾಜೇಶ ನಾಯಕ ದೊರೆ ಹೇಳಿದರು.
ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಗಂಡುಗಲಿ ಕುಮಾರರಾಮ ಹೋರಾಟ ಸಮಿತಿ ಮತ್ತು ಅಖಿಲ ಕರ್ನಾಟಕ ಹರಿಹರ ಹಕ್ಕಬುಕ್ಕ ನಾಯಕ ವೇದಿಕೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನೆ ಮತ್ತು ಹರಿಹರ ದೇವರಾಯ ಪಟ್ಟಾಭಿಷೇಕ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರ ಕಂಪಲಿರಾಯ ಮತ್ತು ಗಂಡುಗಲಿ ಕುಮಾರರಾಮ ಅವರ ಆಡಳಿತದ ಮುಂದುವರೆದ ಭಾಗವೇ ಸಂಗಮ ಮನೆತನದ ಹರಿಹರಬುಕ್ಕರಾಯರ ಆಡಳಿತ. ಆನೆಗೊಂದಿಯಲ್ಲಿ ಕುಮಾರರಾಮನ ಕನಸಿನ ಯೋಜನೆಗಳನ್ನು ಸಾಕಾರಗೊಳಿಸಲಾಗಿದೆ. ಇವರನ್ನು ಅನುಸರಿಸಿದ ಸಾಳುವ, ತುಳುವ, ಅರವೀಡು ಮನೆತನಗಳು ಸುಸ್ಥಿರ ಆಡಳಿತ ನಡೆಸಿ ಜಗತ್ತಿನಾದ್ಯಂತ ಪ್ರಸಿದ್ಧರಾಗಿದ್ದಾರೆ ಎಂದು ತಿಳಿಸಿದರು.
ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ಸುವರ್ಣ ಯುಗವನ್ನು ನಿರ್ಮಿಸಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆ ದಿನವನ್ನು ರಾಜ್ಯ ಸರ್ಕಾರದಿಂದ ಅದ್ದೂರಿ ಆಚರಣೆಗೆ ಆದ್ಯತೆ ನೀಡಬೇಕು ಎಂದರು.
ಪ್ರಮುಖರಾದ ಹರನಾಯಕ, ಭೀಮರಾಯಪ್ಪ ಸಿಂಗಾಪುರ, ಪ್ರಹ್ಲಾದ ಕುಲ್ಕರ್ಣಿ, ದೇವಪ್ಪ ವಾಲೀಕಾರ, ರವಿ ದೋತರ್, ಗುಡ್ಡೆಕಲ್ ಶರಣಪ್ಪ, ಸಿಂಧು, ಹತ್ತಿಮರದ ರಾಜು ನಾಯಕ, ಎಚ್.ಆರ್.ಕುಮಾರರಾಮ, ರಾಮಣ್ಣ, ಜಿ.ಆರ್.ಅರ್ಜುನ್, ದೇವರಾಜ್ ಹೇಮಗುಡ್ಡ, ನರಸಿಂಹ, ಅಭಿನವ ಸೂರ್ಯ ನಾಯಕ ಇತರರಿದ್ದರು.