ಗಂಗಾವತಿ ನಗರದ ಪ್ರಮುಖ ವೃತ್ತಗಳಲ್ಲಿ ಹಾಕಲು ಉದ್ದೇಶಿಸಿರುವ ಬೀದಿ ದೀಪ ಕಂಬದ ವಿನ್ಯಾಸ. (ಮೇಲ್ಭಾಗದಲ್ಲಿ ಚಿನ್ಹೆ ಬದಲಾಗಲಿದೆ.)  
ಜಿಲ್ಲೆ

ಬೀದಿ ದೀಪ ಕಂಬದ ವಿನ್ಯಾಸ ಗೊಂದಲ

ವೀರಾಪುರ ಕೃಷ್ಣ

ಗಂಗಾವತಿ: ನಗರದ ಪ್ರಮುಖ ರಸ್ತೆಗಳಲ್ಲಿನ ವಿದ್ಯುತ್ ಬೀದಿ ದೀಪದ ಕಂಬಗಳ ವಿನ್ಯಾಸದ ಗೊಂದಲ ಸೃಷ್ಟಿಯಾಗಿದ್ದು, ತಿಂಗಳಾದರೂ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಶಾಸಕ ಗಾಲಿ ಜನಾರ್ದರ ರೆಡ್ಡಿ ಆಪ್ತ ಬೆಂಬಲಿಗರ ನಡುವೆ ಒಮ್ಮತ ಮೂಡುತ್ತಿಲ್ಲ.

ನಗರದ ಗಾಂಧಿ ವೃತ್ತದಿಂದ ಸಿಬಿಎಸ್ ವೃತ್ತ, ಕನಕಗಿರಿ ರಸ್ತೆಯ ತಾಲೂಕು ಕ್ರೀಡಾಂಗಣದವರೆಗೂ, ಚನ್ನಬಸವ ಸ್ವಾಮಿ ಮಠದಿಂದ ಶ್ರೀ ನೀಲಕಂಠೇಶ್ವರ ವೃತ್ತದವರೆಗಿನ ವಿದ್ಯುತ್ ಬೀದಿದೀಪ ಮತ್ತು ಡಿವೈಡರ್‌ಗಳಿಗಾಗಿ ಕೆಕೆಆರ್‌ಡಿಬಿ ಅನುದಾನದಲ್ಲಿ 3 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕೆಆರ್‌ಐಡಿಎಲ್‌ಗೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ಡಿವೈಡರ್‌ಗಳನ್ನು ನಿರ್ಮಿಸಿರುವ ಗುತ್ತಿಗೆದಾರರು, ಬೀದಿ ಅಳವಡಿಕೆಗೆ ಕಂಬ ಸ್ಥಾಪಿಸಲು ಮುಂದಾಗುತ್ತಿಲ್ಲ. ಯೋಜನೆ ಅನುಮೋದನೆ ಮೊದಲೇ ವಿನ್ಯಾಸಗೊಳಿಸಿರುವ ಬೀದಿ ದೀಪದ ಕಂಬಗಳನ್ನು ಅಳವಡಿಸಲು ಶಾಸಕ ಗಾಲಿ ಜನಾರ್ದನರೆಡ್ಡಿ ಆಕ್ಷೇಪಿಸಿದ್ದು, ಬದಲಾವಣೆಗೆ ನಗರಸಭೆ ಮತ್ತು ಗುತ್ತಿಗೆ ಕಂಪನಿ ಒಪ್ಪುತ್ತಿಲ್ಲ. ಪಾರಂಪರಿಕ ರೀತಿಯಲ್ಲಿ ಕಂಬ ಬೇಡ, ಸಾಮಾನ್ಯ ರೀತಿಯಲ್ಲಿರಲಿ ಎಂಬುದು ರೆಡ್ಡಿ ಬೆಂಬಲಿಗರ ಒತ್ತಾಯವಾಗಿದ್ದರೆ, ನಗರಸಭೆ ಒಪ್ಪಿರುವ ವಿನ್ಯಾಸನವನ್ನು ಅಂತಿಮಗೊಳಿಸಲಾಗಿದೆ ಎನ್ನುತ್ತಾರೆ ಗುತ್ತಿಗೆದಾರರು.

ವಿವಾದಕ್ಕೆ ಕಾರಣ

ಚೆನೈನ ಕೆ-ಲೈಟ್ ಇಂಡಸ್ಟ್ರೀಸ್ ವಿನ್ಯಾಸಗೊಳಿಸಿರುವ ವಿದ್ಯುತ್ ಕಂಬ ಪಾರಂಪರಿಕ ರೀತಿಯಲ್ಲಿ ರೂಪಿಸಿದ್ದು, ದೂರದಿಂದ ನೋಡಿದರೆ ಮೇಲ್ಭಾಗದಲ್ಲಿ ಕಮಲ ಮತ್ತು ತಿರುಪತಿ ನಾಮ ಹೋಲುವ ಆಕಾರಗಳಿವೆ. ಹಿತ್ತಾಳೆ ಲೇಪಿತ ಕಂಬ ಮತ್ತು ದೀಪದ ಹಿಡಿಕೆಗಳಿದ್ದು, ಒಂದು ಸಮುದಾಯ ಪ್ರತಿನಿಧಿಸುವ ರೀತಿಯಲ್ಲಿ ಕಂಡು ಬರುತ್ತಿದೆ. ಇದೇ ಕಾರಣಕ್ಕಾಗಿ ಇಂತಹ ವಿನ್ಯಾಸ ಬೇಡ, ಯಾವುದೇ ಸಮುದಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ರೂಪಿಸಲಿ ಎನ್ನುವುದು ರೆಡ್ಡಿ ಆಪ್ತ ಬೆಂಬಲಿಗರ ವಾದ. ಉದ್ದೇಶಿತ ವಿನ್ಯಾಸವನ್ನು ಮೇ ತಿಂಗಳಲ್ಲಿ ನಗರಸಭೆ ಒಪ್ಪಿಗೆ ನೀಡಿದ್ದು, ಅದರಂತೆ ಈಗಾಗಲೇ ಕಂಬಗಳನ್ನು ತಯಾರಿಸಲಾಗಿದೆ. ಏಕಾಏಕಿ ಬದಲಿಸಿದರೆ ಹೇಗೆ ಎನ್ನುವುದು ಕೆಆರ್‌ಐಡಿಎಲ್ ಅಧಿಕಾರಿಗಳ ಅಭಿಪ್ರಾಯ. ಶಾಸಕ ರೆಡ್ಡಿ ಆಪ್ತ ಬೆಂಬಲಿಗರ ಅಭಿಪ್ರಾಯವೇ ಸರಿ ಎನ್ನುತ್ತಿರುವುದರಿಂದ ಪರ, ವಿರೋಧದ ಚರ್ಚೆ ಶುರುವಾಗಿದ್ದು, ತಾರ್ಕಿಕ ಅಂತ್ಯ ಕಾಣುತ್ತಿಲ್ಲ.

ತರಾತುರಿ ನಿರ್ಧಾರ ಸರಿಯಲ್ಲ

ಪ್ರಮುಖ ವೃತ್ತಗಳಲ್ಲಿ ಬೀದಿ ದೀಪದ ಕಂಬ ಸುಸ್ಥಿಯಲ್ಲಿದ್ದರೂ ಅನುದಾನ ಬಳಕೆಗಾಗಿ ತರಾತುರಿಯಲ್ಲಿ ಕಂಬಗಳನ್ನು ತೆರವುಗೊಳಿಸಿದ್ದಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಜನೆ ರೂಪಿಸದೇ ತರಾತುರಿಯಲ್ಲಿ ತೆರವು ನಿರ್ಧಾರ ಸರಿಯಲ್ಲ. ಕಳೆದ 2 ತಿಂಗಳಿಂದ ಪ್ರಮುಖ ರಸ್ತೆಗಳು ಕತ್ತಲುಮಯವಾಗಿದ್ದು, ಅಂಗಡಿ, ಮುಂಗಟ್ಟುಗಳ ಬೆಳಕನ್ನೇ ಅವಲಂಬಿಸಬೇಕಿದೆ. ರಾತ್ರಿ 10ರ ನಂತರ ಸಂಪೂರ್ಣ ಕತ್ತಲಾಗುತ್ತಿದ್ದು, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರಸ್ತೆ ಪಕ್ಕದಲ್ಲಿ ತಾತ್ಕಾಲಿಕವಾಗಿ ಹಾಕಿರುವ ಬೀದಿ ದೀಪಗಳು ಬೆಳಗುತ್ತಿಲ್ಲ. ಅಧಿಕಾರಿಗಳಲ್ಲಿ ಸ್ಪಷ್ಟತೆಯಿಲ್ಲ, ಕಂಬ ಹಾಕಲು ಗುತ್ತಿಗೆದಾರರು ಮುಂದಾಗುತ್ತಿಲ್ಲ.

ಸೂಕ್ಷ್ಮತೆ ಅರಿಯಲಿ

2004ರ ನಂತರ ಗಂಗಾವತಿ ನಗರ ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದ್ದು, ಅಯ್ಯಪ್ಪ ಸ್ವಾಮಿ, ಗಣೇಶ ಗಲಾಟೆ ನಂತರ ಮತ್ತಷ್ಟು ವಿವಾದಿತ ಪ್ರದೇಶವಾಗಿದೆ. ಒಂದು ಧಾರ್ಮಿಕ ಸಂಕೇತದ ಚಿನ್ಹೆ ಗಳನ್ನು ವಿದ್ಯುತ್ ಕಂಬದಲ್ಲಿ ಬಳಸಿದರೆ, ಮುಂದಿನ ದಿನಗಳಲ್ಲಿ ಸೌಹಾರ್ದತೆಗೆ ಧಕ್ಕೆಯಾಗಬಹುದು. ಜುಲಾಯಿ ನಗರದಲ್ಲಿ ಅಳವಡಿಸಿರುವ ವಿದ್ಯುತ್ ಕಂಬದಲ್ಲಿ ಹಾಕಿದ್ದ ಶಂಖು, ಚಕ್ರ ಮತ್ತು ಗಧೆ ಚಿತ್ರಗಳು ವಿವಾದಕ್ಕೆ ಗುರಿಯಾಗಿದ್ದು, ಸೂಕ್ಷ್ಮತೆ ಅರಿತ ತಹಸೀಲ್ದಾರ್ ತೆರವಿಗೆ ಬರೆದಿದ್ದ ಪತ್ರ ಸದ್ದು ಮಾಡಿತ್ತು. ಕೊನೆಗೂ ನಗರಸಭೆಯಲ್ಲಿ ಅನುಮೋದನೆ ಪಡೆದ ನಂತರವೇ ಒಪ್ಪಿಗೆ ನೀಡಲಾಯಿತು. ಅಂತಹ ಪರಿಸ್ಥಿತಿ ಪುನಃ ಬರದಂತೆ ನೋಡಿಕೊಳ್ಳಿ ಎನ್ನುವುದು ರೆಡ್ಡಿ ಆಪ್ತ ಬೆಂಬಲಿಗರ ವಾದವಾಗಿದ್ದರೆ, ಕಿಷ್ಕಿಂಧಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ಧಾರ್ಮಿಕ ಸಂಕೇತ ಬಳಸಿಕೊಂಡರೇ ತಪ್ಪೇನೂ ಎನ್ನುವುದು ಹಿಂದುಪರ ಸಂಘಟನೆಗಳ ವಾದ. ಇದೇ ಕಾರಣಕ್ಕಾಗಿ ಬೀದಿ ದೀಪದ ಕಂಬಗಳ ಅಳವಡಿಕೆ ನನೆಗುದಿಗೆ ಬಿದ್ದಿದ್ದು, ನಗರ ಕತ್ತಲು ಆವರಿಸಿಕೊಂಡಿದೆ.

ಸುಸಜ್ಜಿತವಾಗಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದ ನಂತರ ನಗರ ಕತ್ತಲುಮಯವಾಗಿದ್ದು, ಪರ್ಯಾಯ ವ್ಯವಸ್ಥೆಗೆ ನಗರಸಭೆ ಅಧಿಕಾರಿಗಳು ಮುಂದಾಗಬೇಕು. ಮೊಹರಂ, ಶ್ರಾವಣ ಸೇರಿ ಹಬ್ಬಗಳು ಬರುತ್ತಿದ್ದು, ನಗರ ಕತ್ತಲಾಗದಂತೆ ಎಚ್ಚರಿಕೆವಹಿಸಿ. | ಪಂಪಣ್ಣನಾಯಕ ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಗಂಗಾವತಿ
ಮುಂದಾಲೋಚನೆ ಯಿಲ್ಲದೇ ಬೀದಿ ದೀಪದ ಕಂಬಗಳನ್ನು ತೆರವು ಗೊಳಿಸಿದ್ದು ವಿಳಂಬಕ್ಕೆ ಕಾರಣವಾಗಿದ್ದು, ವಾರದೊಳಗೆ ಕಂಬಗಳನ್ನು ಹಾಕಲಾಗುವುದು. ಬೆಳಕಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. | ಆಸ್ಮಾ ವಿದ್ಯುತ್ ದೀಪ ನಿರ್ವಹಣೆ ಇಂಜಿನಿಯರ್, ನಗರಸಭೆ, ಗಂಗಾವತಿ