ಗಂಗಾವತಿ: ನಗರದ ಆನೆಗೊಂದಿ ರಸ್ತೆ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಮೈದಾನದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಬಯಲು ರಂಗ ಮಂದಿರ ನಿರ್ಮಿಸುತ್ತಿದ್ದು, ಅನುದಾನ ದುರ್ಬಳಕೆಯಾಗುತ್ತಿದೆ ಎಂದು ಭೂದಾನಿ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಾಜ್ಯ ಘಟಕದ ಅಧ್ಯಕ್ಷ ಡಾ.ಕೊಲ್ಲಿನಾಗೇಶ್ವರರಾವ್ ಆರೋಪಿಸಿದ್ದಾರೆ.
ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಮತ್ತು ಕೊಪ್ಪಳ ವಿವಿಗೆ ಪತ್ರ ಬರೆದಿದ್ದು, ಬಡ ಮಕ್ಕಳ ಅಧ್ಯಯನಕ್ಕಾಗಿ ಆನೆಗೊಂದಿ ರಸ್ತೆಯಲ್ಲಿ 30 ವರ್ಷಗಳ ಹಿಂದೆ 3.28 ಎಕರೆ ಭೂಮಿಯನ್ನು ಪದವಿ ಕಾಲೇಜಿಗೆ ದಾನವಾಗಿ ನೀಡಲಾಗಿದೆ. 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಿಗೆ ಬರುವ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ. ಈಗಾಗಲೇ ಕಾಲೇಜಿನಲ್ಲಿ ಎಸ್.ರಾಧಕೃಷ್ಣನ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಎರಡು ಸಭಾಂಗಣಗಳಿದ್ದರೂ, ಅನುದಾನ ಬಳಕೆ ಉದ್ದೇಶಕ್ಕಾಗಿ ಕಾಲೇಜಿನ ಮುಂಭಾಗದಲ್ಲಿ ಬಯಲು ರಂಗ ಮಂದಿರವನ್ನು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ತಡೆಹಿಡಿಯುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮಂದಿರವನ್ನು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ್ದರಿಂದ ಕಾಲೇಜು ಕಟ್ಟಡದ ಮುನ್ನೋಟಕ್ಕೆ ಅಡಿಯಾಗುತ್ತಿದ್ದು, ತರಗತಿ ಕೊಠಡಿಗಳಿಗೆ ಗಾಳಿ, ಬೆಳಕು ಇಲ್ಲದಂತಾಗುತ್ತಿದೆ. ಮೈದಾನದ ಜಾಗ ಅನಗತ್ಯ ಬಳಕೆಯಾಗುತ್ತಿದೆ. ಆಟದ ಮೈದಾನದಲ್ಲಿ ಯಾವುದೇ ಕಟ್ಟಡ ನಿರ್ಮಿಸದಂತೆ ಜು.7ರಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಗಾಲಿ ಜನಾರ್ದನರೆಡ್ಡಿಗೆ ದೂರು ನೀಡಲಾಗಿತ್ತು. ಅನಗತ್ಯ ಕಾಮಗಾರಿ ಕುರಿತು ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪರಿಗೆ ಮಾಹಿತಿ ನೀಡಲಾಗಿತ್ತು. ಕಾಲೇಜಿನಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ಶೌಚಗೃಹ ಕುಡಿವ ನೀರಿನ ಸಮರ್ಪಕ ವ್ಯವಸ್ಥೆಯಿಲ್ಲ ಎಂದು ದೂರಿದ್ದಾರೆ.
ಮೂಲ ಸೌಕರ್ಯಕ್ಕೆ ಅನುದಾನ ಬಳಸುವ ಬದಲು ಸಭಾಂಗಣಗಳಿದ್ದರೂ ಬಯಲು ರಂಗ ಮಂದಿರ ಹೆಸರಿನಲ್ಲಿ ಅನುದಾನ ದುರ್ಬಳಕೆ ಮಾಡುತ್ತಿರುವುದು ಸರಿಯಲ್ಲ. ಕಾಮಗಾರಿ ಸ್ಥಗಿತದ ಬಗ್ಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಭರವಸೆ ನೀಡಿದ್ದು, ಸಂಬಂಧಪಟ್ಟ ಗುತ್ತಿಗೆದಾರರಿಗೂ ದೂರವಾಣಿ ಮೂಲಕ ಸ್ಥಗಿತಕ್ಕೆ ಸೂಚಿಸಿದ್ದಾರೆ. ಅನುದಾನ ಬಳಕೆಗಾಗಿ ಕಾಮಗಾರಿಯನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ನಿರ್ವಹಿಸಿದ್ದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ದೂರು ನೀಡಲಾಗುವುದು. ಉನ್ನತ ಶಿಕ್ಷಣ ಮತ್ತು ವಿವಿ ಅಧಿಕಾರಿಗಳ ಸ್ಥಳ ಪರಿಶೀಲಿಸಿ, ಅನುದಾನ ದುರ್ಬಳಕೆ ನಿಲ್ಲಿಸುವಂತೆ ಒತ್ತಾಯಿಸಿದರು.
ಕಾಮಗಾರಿ ಕುರಿತು ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ ಮೌನಕ್ಕೆ ಜಾರಿದ್ದು, ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.