ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಜಿಲ್ಲಾ ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಅಧ್ಯಕ್ಷ ಎಂ.ಎನ್.ಕುಕನೂರು, ಜಿಲ್ಲಾಧ್ಯಕ್ಷ ದೊಡ್ಡಭರಮಣ್ಣ, ಪದಾಧಿಕಾರಿಗಳಾದ ನಾಗರಾಜ್ ಬಾವಿಕಟ್ಟಿ, ದೇವಪ್ಪ ಹಳ್ಳಿಗುಡಿ, ಹನುಮಂತಪ್ಪ ಬೇವೂರ್ ಇತರರಿದ್ದರು.  
ಜಿಲ್ಲೆ

ಬೆಳೆ ವಿಮೆ ಪರಿಹಾರ ನೀಡಿ

ಗಂಗಾವತಿ: ರೈತರಿಗೆ ಬೆಳೆ ವಿಮೆ ಪರಿಹಾರ ವಿತರಣೆಗೆ ಒತ್ತಾಯಿಸಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಜಿಲ್ಲಾ ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಸುನೀಲ್ ಕುಲ್ಕರ್ಣಿಗೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಅಧ್ಯಕ್ಷ ಎಂ.ಎನ್. ಕುಕನೂರು ಮಾತನಾಡಿ, ಬೆಳೆನಷ್ಟ, ಸಾಲಭಾದೆಯಿಂದ ರೈತರು ಸಂಕಷ್ಟಕ್ಕೊಳಗಾಗಿದ್ದು, ಕೃಷಿ ಕ್ಷೇತ್ರ ನಿರ್ಲಕ್ಷಿಸಲಾಗುತ್ತಿದೆ. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಎಕರೆಗೆ 25ಸಾವಿರ ರೂ. ಪರಿಹಾರ ಒದಗಿಸುವ ಬಗ್ಗೆ ಸರ್ಕಾರದಲ್ಲಿ ಸ್ಪಷ್ಟತೆಯಿಲ್ಲ. ಬೆಳೆ ವಿಮೆ ಪರಿಹಾರ ರೈತರಿಗೆ ದೊರೆಯುತ್ತಿಲ್ಲ.

ಸಕಾಲಕ್ಕೆ ಬೀಜ, ರಸಗೊಬ್ಬರ, ಕೀಟನಾಶಕ ದೊರೆಯುತ್ತಿಲ್ಲ ಎಂದರು. ರೈತರಿಗೆ ಬೀಜ, ರಸಗೊಬ್ಬರ ಕೀಟನಾಶಕ ಉಚಿತ ವಿತರಣೆ, ಸಾಲಮನ್ನಾ ಜತೆಗೆ ಹೊಸ ಸಾಲ ಸರಳೀಕರಣಗೊಳಿಸುವುದು, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ, ಬೆಂಬಲ ಬೆಲೆ ಜತೆಗೆ ಖರೀದಿ ಖಚಿತಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ದೊಡ್ಡಭರಮಣ್ಣ, ಪದಾಧಿಕಾರಿಗಳಾದ ನಾಗರಾಜ್ ಬಾವಿಕಟ್ಟಿ, ದೇವಪ್ಪ ಹಳ್ಳಿಗುಡಿ, ಹನುಮಂತಪ್ಪ ಬೇವೂರ್, ಮೋಹನಸಿಂಗ್, ಯಮನಪ್ಪ, ಕೊಂಡಯ್ಯ ಇತರರಿದ್ದರು.