ಗಂಗಾವತಿ ನಗರಸಭೆಗೆ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ನೇತೃತ್ವದ ತಂಡ ಸೋಮವಾರ ದಿಢೀರ್ ಭೇಟಿ ನೀಡಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿತು. 
ಜಿಲ್ಲೆ

ನಗರಸಭೆಗೆ ಲೋಕಾಯುಕ್ತರ ದಿಢೀರ್ ಭೇಟಿ

ಗಂಗಾವತಿಯಲ್ಲಿ ಬಹುತೇಕ ಸಿಬ್ಬಂದಿ ನಾಪತ್ತೆ

ಗಂಗಾವತಿ: ನಗರದ ನಗರಸಭೆ ಕಚೇರಿಗೆ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಸೋಮವಾರ ದಿಢೀರ್ ಭೇಟಿ ನೀಡಿದ್ದು, ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ನಗರಸಭೆ ಆಡಳಿತ ವೈಖರಿ ಬಗ್ಗೆ ಸಾರ್ವಜನಿಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಮಧ್ಯಾಹ್ನ 3.30ಕ್ಕೆ ನೀಡಿದಾಗ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಸೇರಿ ಬಹುತೇಕ ವಿಷಯ ನಿರ್ವಾಹಕರು ಇರಲಿಲ್ಲ. ಖಾಲಿ ಕುರ್ಚಿಗಳ ವಿಡಿಯೋ ಚಿತ್ರೀಕರಣ ಮಾಡಿಕೊಂಡರಲ್ಲದೇ, ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು. ಯಾವುದೇ ಮಾಹಿತಿ ನೀಡದೇ ಹೊರ ಹೋಗಿದ್ದ ಸಿಬ್ಬಂದಿ ವಿವರ ಪಡೆದುಕೊಂಡರು. ಸಿಬ್ಬಂದಿಗಾಗಿ ಕಾಯುತ್ತ ಕುಳಿತಿದ್ದ ಸಾರ್ವಜನಿಕರನ್ನು ಸಂಪರ್ಕಿಸಿದ ತಂಡ, ಕಡತ ವಿಲೇವಾರಿ ವಿಚಾರದಲ್ಲಿ ನಗರಸಭೆ ಸಿಬ್ಬಂದಿಯಿಂದಾಗುತ್ತಿರುವ ತೊಂದರೆ ಬಗ್ಗೆ ಅಹವಾಲುಗಳನ್ನು ಪಡೆಯಿತು. ಕಚೇರಿಗೆ ಆಗಮಿಸಿದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಸಾರ್ವಜನಿಕರ ಸಮಸ್ಯೆ ಕೂಡಲೇ ಇತ್ಯರ್ಥಪಡಿಸುವಂತೆ ಸೂಚಿಸಿದರು.

ಕಡತಗಳ ಪರಿಶೀಲನೆ

ಕಚೇರಿಯ ನೈರ್ಮಲ್ಯ, ಕಂದಾಯ, ಲೆಕ್ಕಪತ್ರ, ಆಡಳಿತ ಸೇರಿ ವಿವಿಧ ವಿಭಾಗಗಳ ಕಡತಗಳನ್ನು ಪರಿಶೀಲಿಸಿದರಲ್ಲದೇ, ಅನುಮಾನ ಬಂದ ಕೆಲ ದಾಖಲೆಗಳನ್ನು ಸಂಗ್ರಹಿಸಿದರು. ಕೆಲವುಗಳನ್ನು ಪೆನ್ ಡ್ರೈವ್‌ನಲ್ಲಿ ದಾಖಲೀಕರಿಸಿಕೊಂಡರು. ಕರ ವಸೂಲಿ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಕಂದಾಯ ನಿರೀಕ್ಷಕ ಸೇರಿ ಕರವಸೂಲಿ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದರು. ಫಾರ್ಮ್- ನಂ3, ಎ ಮತ್ತು ಬಿ ಖಾತೆ ವಿತರಣೆಯಲ್ಲಾಗುತ್ತಿರುವ ವಿಳಂಬ ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಸಂಬಂಧ ಪಟ್ಟ ಸಿಬ್ಬಂದಿಯನ್ನು ವಿಚಾರಿಸಿದರಲ್ಲದೇ, ಕರ್ತವ್ಯ ವಿಚಾರದಲ್ಲಿ ವರ್ತನೆ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.

ಶ್ರೀಮಂತರು ಉಳಿಸಿಕೊಂಡ ಕರವಸೂಲಿ ಮಾಡದೇ, ಬಡ ಮತ್ತು ಮಧ್ಯಮ ವರ್ಗದವರ ಕರ ವಸೂಲಿಗೆ ಮಾಲೀಕರಿಗೆ ಕಿರುಕುಳ ನೀಡುತ್ತಿರುವ ಸಿಬ್ಬಂದಿ ಮಾಹಿತಿ ಪಡೆದುಕೊಂಡರು. ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ಮಾತನಾಡಿ, ನಗರಸಭೆ ಸಿಬ್ಬಂದಿ ವರ್ತನೆ ಮತ್ತು ಘನತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಅತಿಹೆಚ್ಚು ದೂರುಗಳು ಬಂದಿದ್ದವು. ಹೀಗಾಗಿ ದಿಢೀರ್ ಭೇಟಿ ನೀಡಲಾಗಿದೆ. ಪೌರಾಯುಕ್ತ ಸೇರಿ ಬಹುತೇಕ ಸಿಬ್ಬಂದಿ ಕಚೇರಿಯಲ್ಲಿರಲಿಲ್ಲ, ಹೊರ ಹೋಗಿರುವ ಕಾರಣದ ಬಗ್ಗೆಯೂ ಹಾಜರಾತಿ ಪುಸ್ತಕದಲ್ಲಿ ನಮೂದಿಸಿಲ್ಲ. ಎಲ್ಲ ವಿಭಾಗದ ಕಡತಗಳನ್ನು ಪರಿಶೀಲಿಸಲಾಗಿದ್ದು, ಕೆಲವೊಂದು ದಾಖಲಾತಿಗಳನ್ನು ಪಡೆದುಕೊಳ್ಳಲಾಗಿದೆ. ಸಾರ್ವಜನಿಕರಿಂದಲೂ ಅಹವಾಲು ಪಡೆದುಕೊಂಡಿದ್ದು, ಕಡತ ವಿಲೇವಾರಿ ವಿಳಂಬದ ಬಗ್ಗೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರೊಂದಿಗೆ ಯಾವ ರೀತಿಯಲ್ಲಿ ವರ್ತಿಸಬೇಕೆಂಬ ಬಗ್ಗೆ ಅಧಿಕಾರಿಗಳು ಸೇರಿ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ ಎಂದರು. ಲೋಕಾಯುಕ್ತ ತಂಡ ಪಿಎಸೈಗಳಾದ ವೀರನಗೌಡ, ಮಂಜುನಾಥ ಇತರರಿದ್ದರು.

22 ವಾಹನಗಳಿಗಿಲ್ಲ ಎಫ್ ಸಿ

ಘನತ್ಯಾಜ್ಯ ವಿಲೇವಾರಿ, ನೈರ್ಮಲೀಕರಣ ಸೇರಿ ನಗರಸಭೆಯಿಂದ ನಿರ್ವಹಿಸುತ್ತಿರುವ 35 ವಾಹನಗಳ ಪೈಕಿ 22 ವಾಹನಗಳಿಗೆ ಆರ್‌ಟಿಒನಿಂದ ಎ್ಸಿ ಪಡೆದಿಲ್ಲರುವುದು ಗಮನಕ್ಕೆ ಬಂದಿದ್ದು, ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಕಾನೂನು ಪ್ರಕಾರ ಎ್ಸಿ ಇಲ್ಲದೇ ವಾಹನಗಳು ರಸ್ತೆಗಿಳಿಯಲು ಬರಲ್ಲ. ವರ್ಷದಿಂದ ಎ್ಸಿ ಪಡೆಯದಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ನೈರ್ಮಲ್ಯ ವಿಭಾಗದ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಅದರಂತೆ ನಗರಸಭೆಯಿಂದ ಕೈಗೆತ್ತಿಕೊಂಡ ಕಾಮಗಾರಿಗಳ ದಾಖಲೆ ಮತ್ತು ಅನುದಾನ ಬಳಕೆಯ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ್ದು, ಕೆಲವೊಂದು ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ನಗರಸಭೆ ಕಚೇರಿಯಲ್ಲಿನ ಆಡಳಿತ ವೈಖರಿಯ ಬಗ್ಗೆ ಅತಿಹೆಚ್ಚು ದೂರುಗಳು ಬಂದಿದ್ದು, ಹೀಗಾಗಿ ದಿಢೀರ್ ಭೇಟಿ ನೀಡಲಾಗಿದೆ. 3.30ಕ್ಕೆ ಪೌರಾಯುಕ್ತ ಸೇರಿ ಬಹುತೇಕ ಸಿಬ್ಬಂದಿ ಕರ್ತವ್ಯದಲ್ಲಿರಲಿಲ್ಲ. ಕರ್ತವ್ಯ ಲೋಪದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಾರಸ್ಸು ಮಾಡಲಾಗುವುದು.

| ವಸಂತಕುಮಾರ ಡಿವೈಎಸ್ಪಿ ಲೋಕಾಯುಕ್ತ