ಗಂಗಾವತಿ: ನಗರಸಭೆ ವಿಪಕ್ಷ ನಾಯಕನ ಕೊಠಡಿಗೆ ಬೀಗ ಹಾಕಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕೊಠಡಿ ಬೀಗ ತೆರೆದು ಅಧಿಕಾರಿಗಳು ಮಂಗಳವಾರ ತಾತ್ಕಾಲಿಕವಾಗಿ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವಿನ ವೈಮನಸ್ಸಿನಿಂದ ವಿಪಕ್ಷ ನಾಯಕ ಕಾಂಗ್ರೆಸ್ಸಿನ ಮನೋಹರಸ್ವಾಮಿ ಹಿರೇಮಠ ಕೊಠಡಿಗೆ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಬೀಗ ಹಾಕಿದ್ದರು. ಶಾಸಕ ಗಾಲಿ ಜನಾರ್ದನರೆಡ್ಡಿ ಆಡಳಿತ ವೈಖರಿ, ಅಭಿವೃದ್ಧಿ ವಿಳಂಬ ಕುರಿತು ವಿಪಕ್ಷ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರ ಮೊಟಕುಗೊಳಿಸುವ ಕಾರ್ಯಕ್ಕೆ ಆಡಳಿತ ಪಕ್ಷ ಮುಂದಾಗಿತ್ತು. ಈ ಬಗ್ಗೆ ಪರ, ವಿರೋಧ ಚರ್ಚೆ ಮತ್ತು ಕಾನೂನು ಮೊರೆ ಹೋಗುವ ಕುರಿತು ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಕೊಠಡಿ ಬೀಗ ತೆರೆದು, ಆಡಳಿತ ನಿರ್ವಹಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬೀಗ ತೆರೆದಿರುವ ಬಗ್ಗೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ ಪ್ರತಿಕ್ರಿಯೆಸಿ, ಯಾವಕಾರಣಕ್ಕೆ ಬೀಗ ಹಾಕಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಅಧಿಕಾರಿಗಳು ಮಧ್ಯಪ್ರವೇಶಿಸಿ ಇತ್ಯರ್ಥಪಡಿಸಿದ್ದಾರೆ ಎಂದರು.
ಆಡಳಿತ ಮತ್ತು ವಿಪಕ್ಷ ಸದಸ್ಯರ ಸಂಧಾನ ಹಿನ್ನೆಯಲ್ಲಿ ಕೊಠಡಿ ಬೀಗ ತೆರೆದಿದ್ದು, ದೀರ್ಘ ರಜೆಯಲ್ಲಿರುವ ಪೌರಾಯುಕ್ತರು ಬಂದ ನಂತರ ವಾಸ್ತವಾಂಶ ಗೊತ್ತಾಗಲಿದೆ ಎಂದು ಹೆಸರೇಳಲಿಚ್ಛಿಸದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಬೆಚ್ಚಿಬಿದ್ದರಾ ವಲಸಿಗ ಕಾಂಗ್ರೆಸ್ ಮೆಂಬರ್ಸ್….?
ಬಿಜೆಪಿ ಆಡಳಿತಕ್ಕೆ ಬರಲು ಕಾಂಗ್ರೆಸ್‌ನ 8 ಸದಸ್ಯರು ಕಾರಣ. ಬೀಗ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾನೂನಾತ್ಮಕ ತೊಂದರೆ ನೀಡಬಹುದು ಮತ್ತು ಸರ್ಕಾರದ ಅನುದಾನಕ್ಕೆ ಕೊಕ್ಕೆ ಹಾಕಬಹುದೆಂಬ ಬೆದರಿಕೆಯಿಂದ ವಲಸಿಗ ಕಾಂಗ್ರೆಸ್ಸಿಗರು ರಾಜಿಸಂಧಾನಕ್ಕೆ ಒಪ್ಪಿದ್ದಾರೆನ್ನಲಾಗಿದೆ. ಪ್ರತಿಕಾರ ರಾಜಕಾರಣಕ್ಕಿಂತ ಸಹಕಾರ ರಾಜಕೀಯ ಮೇಲು ಎಂದರಿತ ಸದಸ್ಯರು, ಬೀಗ ಹಾಕಿದ ಪ್ರಕರಣವನ್ನು 20 ಗಂಟೆಯಲ್ಲಿ ಇತ್ಯರ್ಥಪಡಿಸಿದ್ದಾರೆ.