ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ವ್ಯವಸ್ಥೆಗೊಳಿಸಿರುವ ಸಿಟಿ ಸ್ಕ್ಯಾನ್ ಯಂತ್ರವನ್ನು ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣಮುನವಳ್ಳಿ ಮಂಗಳವಾರ ಪರಿವೀಕ್ಷಿಸಿದರು. 
ಜಿಲ್ಲೆ

ಕೇಬಲ್ ಕಾರ್ ವ್ಯವಸ್ಥೆಗೆ ನಿರ್ಧಾರ: ಸಂಸದ ಕರಡಿ ಸಂಗಣ್ಣ ಹೇಳಿಕೆ

ಗಂಗಾವತಿ: ಬಡ ಮತ್ತು ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಸಿಟಿ ಸ್ಕ್ಯಾನ್ ಖರೀದಿಸಿದ್ದು, ಶೀಘ್ರದಲ್ಲಿ ಶುಲ್ಕ ನೀತಿ ರೂಪಿಸಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಯಂತ್ರ ಮಂಗಳವಾರ ವೀಕ್ಷಿಸಿ ಮಾತನಾಡಿದರು. ಕೆಕೆಆರ್‌ಡಿಬಿ ಅನುದಾನದಡಿ ಮೂರು ಕೋಟಿ ರೂ.ವೆಚ್ಚದಲ್ಲಿ ಸಿಟಿ ಸ್ಕ್ಯಾನ್ ಯಂತ್ರ ಖರೀದಿಸಲಾಗಿದ್ದು, ಅ.2ರಂದು ಜನಸೇವೆಗೆ ಲೋಕಾರ್ಪಣೆ ಮಾಡಲಾಗುವುದು. ಬಿಪಿಎಲ್ ಕಾರ್ಡ್ ಇದ್ದವರು ಮತ್ತು ಅಪಘಾತಕ್ಕೊಳಗಾದವರಿಗೆ ಉಚಿತ ವ್ಯವಸ್ಥೆಯಿದ್ದು, 80 ಬಗೆಯ ರೋಗಗಳ ಬಗ್ಗೆ ಪತ್ತೆ ಮಾಡುವ ಸಾಮರ್ಥ್ಯ ಯಂತ್ರಕ್ಕಿದೆ. ಎಪಿಎಲ್ ಕಾರ್ಡ್‌ದಾರರಿಗೆ ಶುಲ್ಕ ನಿಗದಿಪಡಿಸಲಾಗುವುದು. 60 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಹಂತದಲ್ಲಿದ್ದು, ಆರೋಗ್ಯ ಸಚಿವ ಡಾ.ಸುಧಾಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ನೇತೃತ್ವದಲ್ಲಿ ಶೀಘ್ರವೇ ಉದ್ಘಾಟಿಸಲಾಗುವುದು ಎಂದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ನಗರದ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿ ಬೆಟ್ಟದವರೆಗೂ ಕೇಬಲ್ ಕಾರ್ ವ್ಯವಸ್ಥೆಗೆ ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. 10 ಕಿ.ಮೀ.ಉದ್ದದ ಕೇಬಲ್ ಕಾರ್‌ನಿಂದ ಬೆಟ್ಟ, ನದಿ ಸೇರಿ ಪ್ರಕೃತಿ ಕಣ್ತುಂಬಿಕೊಳ್ಳಲು ಅನುಕೂಲವಾಗಲಿದೆ ಎಂದರು.

ನಯೋಪ್ರಾ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ, ನಗರಸಭೆ ಸದಸ್ಯರಾದ ವಾಸುದೇವ ನವಲಿ, ಉಮೇಶ ಸಿಂಗನಾಳ್, ಪರಶುರಾಂಮಡ್ಡೇರ್, ನವೀನ್ ಮಾಲಿ ಪಾಟೀಲ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಟಿ.ಆರ್.ರಾಯಭಾಗಿ, ಮುಖಂಡರಾದ ಸಿದ್ದಲಿಂಗಯ್ಯ ಗಡ್ಡಿಮಠ, ಶ್ರವಣಕುಮಾರ ರಾಯ್ಕರ್, ಶಿವಪ್ಪ ಮಾದಿಗ, ರಾಚಪ್ಪ ಸಿದ್ದಾಪುರ ಇತರರಿದ್ದರು.

ಗಂಗಾವತಿ ರೈಲು ನಿಲ್ದಾಣದಿಂದ ಅಂಜನಾದ್ರಿ ಬೆಟ್ಟದವರೆಗಿನ ರೋಪವೇ ಕೇಬಲ್ ಕಾರ್ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಚರ್ಚಿಸಲಾಗುತ್ತಿದ್ದು, ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲಾಗುವುದು.| ಕರಡಿ ಸಂಗಣ್ಣ, ಸಂಸದ, ಕೊಪ್ಪಳ